

ಬೀಜಿಂಗ್: ಮೂರು ವರ್ಷದ ಪುಟ್ಟ ಬಾಲಕನೊಬ್ಬ ಆಕಸ್ಮಿಕವಾಗಿ ಬೃಹತ್ ಕಟ್ಟಡದ 29ನೇ ಮಹಡಿಯಿಂದ ಬಿದ್ದರೂ ಪವಾಡರೀತಿಯಲ್ಲಿ ಬದುಕುಳಿದ ಘಟನೆ ಪೂರ್ವ ಚೀನಾದಲ್ಲಿ ನಡೆದಿದೆ.
ಬಾಲಕನ ಹೆಸರು ಯಂಗ್ ಯಂಗ್. ಮನೆಯಲ್ಲಿ ಅಜ್ಜಿಯೊಂದಿಗಿ ಬಿಟ್ಟು ಪಾಲಕರು ಹೊರ ಹೋಗಿದ್ದ ಸಂದರ್ಭದಲ್ಲಿ ಮೇಜಿನ ಸಹಾಯದಿಂದ ಅಡುಗೆ ಮನೆಯ ಕಿಟಕಿ ಏರಿದದ ಬಾಲಕ ನಂತರ ಅಲ್ಲಿಂದ 300 ಅಡಿ ಕೆಳಗಿನ ಹೂವು ಹಾಸಿನ ಮೇಲೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ 9 ದಿನಗಳ ನಿರಂತರ ಚಿಕಿತ್ಸೆಯ ಬಳಿಕ ಆತನ ಆರೋಗ್ಯ ಸದ್ಯ ಸ್ಥಿರವಾಗಿದೆ. ಇದನ್ನೂ ಓದಿ: ಕುಟುಂಬದೊಳಗೆ ಕರೊನಾ ಸುಲಭವಾಗಿ ಹರಡುತ್ತೆ: ಅಧ್ಯಯನ ವರದಿಯಲ್ಲಿದೆ ಸ್ಪೋಟಕ ಮಾಹಿತಿ
ಈ ಘಟನೆಯು ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಜೂನ್ 8ರ ಮಧ್ಯಾಹ್ನ ನಡೆದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಾಲಕನ ಪಾಲಕರು ಕೇಂದ್ರ ಪ್ರಾಂತ್ಯದ ಹೆನಾನ್ನಿಂದ ವಲಸೆ ಬಂದ ಕಾರ್ಮಿಕರು ಎಂದು ಹೇಳಲಾಗಿದೆ. ಕೆಲಸದ ನಿಮಿತ್ತ ತೆರಳಲು ಬಾಲಕನನ್ನು ನೋಡಿಕೊಳ್ಳಲು ಅಜ್ಜಿಗೆ ಹೇಳಿದ್ದರಂತೆ. ಆದರೆ, ಅಜ್ಜಿ ಬಾಲಕನನ್ನು ಒಂಟಿಯಾಗಿ ಬಿಟ್ಟು ಟಿವಿ ನೋಡುವುದರಲ್ಲಿ ನಿರತರಾಗಿದ್ದಳು. ಮತ್ತೆ ಹೊರಗಿ ಹೋಗಿ ಬಂದು ನೋಡುವಷ್ಟರಲ್ಲಿ ಬಾಲಕನಿಲ್ಲದಿರುವುದನ್ನು ಗಮನಿಸಿ, ಹುಡುಕಾಡಿದ್ದಾಳೆ. ಈ ವೇಳೆ ಅಡುಗೆ ಮನೆಗೆ ಹೋಗಿ ನೋಡಿದಾಗ ಮುಚ್ಚಿದ್ದ ಕಿಟಕಿ ಬಾಗಿಲ ತೆರೆದಿರುವುದನ್ನು ಗಮನಿಸಿದ್ದಾಳೆ. ತಕ್ಷಣ ಮನೆಯ ಹೊರಗಡೆ ಓಡಿ ಹೋಗಿ ನೋಡಿದಾಗ ಕಟ್ಟಡದ ಕೆಳಗಿನ ಹೂವು ಹಾಸಿನ ಮೇಲೆ ಬಾಲಕ ಪ್ರಜ್ಞೆಯಿಲ್ಲದೇ ಬಿದ್ದಿರುವುದನ್ನು ಕಂಡು, ತಾನೂ ಕುಸಿದುಬಿದ್ದು, ಕಣ್ಣೀರಿಟ್ಟಿದ್ದಾಳೆ.
ಮಗು ಮೇಲಿಂದ ಬೀಳುವ ರಭಸಕ್ಕೆ ಕಟ್ಟಡದ ಸಮೀಪವಿದ್ದ ಮರದ ಒಂದು ಟೊಂಗೆ ಮುರಿದುಬಿದ್ದಿದ್ದು, ಬೀಳುವ ರಭಸ ಕಡಿಮೆಯಾದ್ದರಿಂದ ಬಾಲಕನ ಪ್ರಾಣ ಹಾನಿಯನ್ನು ಕೊಂಚ ಮಟ್ಟಿಗೆ ತಗ್ಗಿಸಿದೆ. ಗಾಯಗೊಂಡಿದ್ದ ಆತನನ್ನು ತಕ್ಷಣ ಛಾಂಗ್ಜೌ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆತನ ತಂದೆ ಇಡೀ ಘಟನೆಯನ್ನು ವಿವರಿಸಿದರು.
ಇನ್ನು ಬಾಲಕನ ಸ್ಥಿತಿಯ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಐಸಿಯು ವಿಭಾಗದ ನಿರ್ದೇಶಕ ಡಾ. ಝೌ ಗೌಜಿನ್, ಬಾಲಕನನ್ನು ಆಸ್ಪತ್ರೆಗೆ ಕರೆತಂದಾಗ ಆತನ ಸ್ಥಿತಿ ಚಿಂತಾಜನಕವಾಗಿತ್ತು. ಉಸಿರಾಟದ ತೊಂದರೆಯು ಎದುರಾಗಿತ್ತು. ಸಾಕಷ್ಟು ರಕ್ತಸ್ರಾವದಿಂದ ಬಾಲಕ ಬಳಲಿದ್ದ. ಶ್ವಾಸಕೋಶ ಹಾಗೂ ಕಿಡ್ನಿಗೂ ಹಾನಿಯಾಗಿದೆ. ಪಕ್ಕೆಲುಬುಗಳು ಮುರಿದಿದ್ದವು. ತಕ್ಷಣ ಆಸ್ಪತ್ರೆಯು 10 ತಜ್ಞರ ತಂಡವನ್ನು ರಚಿಸಿ ಬಾಲಕನಿಗೆ ಒಂದು ವಾರಕ್ಕೂ ಅಧಿಕ ಕಾಲ ಚಿಕಿತ್ಸೆ ನೀಡಿದೆವು. ಇದೀಗ ಬಾಲಕನಿಗೆ ಮರಳಿ ಪ್ರಜ್ಞೆ ಬಂದಿದೆ. ಆತನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್) ಇದನ್ನೂ ಓದಿ: ಹಳೆಯ ಕಾಲದ ಚೊಂಬೆಂದು ನಂಬಿಸಿ ಟ್ರಾವೆಲ್ಸ್ ಉದ್ಯಮಿಗೆ 2 ಕೋಟಿ ರೂ. ಚೊಂಬು!