ಹಳೆಯ ಕಾಲದ ಚೊಂಬೆಂದು ನಂಬಿಸಿ ಟ್ರಾವೆಲ್ಸ್ ಉದ್ಯಮಿಗೆ 2 ಕೋಟಿ ರೂ. ಚೊಂಬು!

Cheats
Published on

ಬೆಂಗಳೂರು: ಪುರಾತನ ಕಾಲದ ವಿಶೇಷ ಶಕ್ತಿಯುಳ್ಳ ಚೊಂಬು ತೋರಿಸಿ ಉದ್ಯಮಿಗೆ 2.10 ಕೋಟಿ ರೂ. ವಂಚಿಸಿದ ನಾಲ್ವರು ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಆರೋಪಿಗೆ ಕರೊನಾ ಸೋಂಕಿರುವುದು ದೃಢಪಟ್ಟಿದ್ದು, ಉಳಿದ ಮೂವರನ್ನು ಕ್ವಾರಂ ಟೈನ್ ಮಾಡಲಾಗಿದೆ.

ತಮಿಳು ನಾಡು ಮೂಲದ ಶಿವ ಕುಮಾರ್ (44), ಗೋಪಾಲ್ (42), ಮಹೇಶ್ (39) ಮತ್ತು ನಾಗರಾಜು (48) ಬಂಧಿತರು. 6 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎಚ್​ಎಸ್​ಆರ್ ಲೇಔಟ್ 1ನೇ ಹಂತದ ನಿವಾಸಿ ಎನ್.ಪಿ. ಮಹೇಶ್ ಎಂಬುವರಿಗೆ ವಂಚನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಚಿರು ನಿಧನದ ಬಳಿಕ ಮೇಘನಾ ಮೊದಲ ಟ್ವೀಟ್: ಪತಿಗೆ ಬರೆದರು ಭಾವುಕ ಸಂದೇಶ

ಟ್ರಾವೆಲ್ಸ್ ಉದ್ಯಮಿಯಾದ ಎನ್.ಪಿ. ಮಹೇಶ್​ಗೆ 2017ರಲ್ಲಿ ಶಿವಕುಮಾರ್, ಚಿದಾನಂದಬಾಬು, ಮಹೇಶ್ ಮತ್ತು ನಾಗರಾಜು ಪರಿಚಯವಾಗಿದ್ದರು. ಮಹೇಶ್ ವ್ಯವಹಾರ ಹಾಗೂ ಹಣದ ಬಗ್ಗೆ ಮಾಹಿತಿ ಕಲೆಹಾಕಿದ್ದ ಆರೋಪಿಗಳು, ಇತರ ಸಹಚರರ ಜತೆ ಸೇರಿಕೊಂಡು ರೈಸ್ ಪುಲ್ಲಿಂಗ್ ದಂಧೆ ಮೂಲಕ ವಂಚನೆ ಮಾಡಲು ಸಂಚು ರೂಪಿಸಿದ್ದರು.

ಮಾರತ್ತಹಳ್ಳಿ ಹೊರವರ್ತಲ ರಸ್ತೆ ಯಲ್ಲಿನ ಕೆಫೆ ಕಾಫಿ ಡೇಗೆ ಮಹೇಶ್ ಕರೆಸಿದ ಆರೋಪಿಗಳು, ಸ್ನೇಹಿತನ ಬಳಿ ಪುರಾತನ ಕಾಲದ ಚೊಂಬು ಇದೆ. ವಿದೇಶದಲ್ಲಿ ದುಬಾರಿ ಬೆಲೆ ಇದ್ದು, ಕೋಟ್ಯಂತರ ರೂ.ಗಳಿಗೆ ಮಾರಾಟ ಮಾಡಬಹುದು. ಆದರೆ, ತುರ್ತಾಗಿ ಹಣ ಬೇಕಾಗಿರುವ ಕಾರಣಕ್ಕೆ ಮಾರುತ್ತಿದ್ದಾನೆ. ಚೊಂಬು ಖರೀದಿಸಿದರೆ ವಿದೇಶಿ ಗಿರಾಕಿ ಅಥವಾ ಶ್ರೀಮಂತರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಬಹುದು ಎಂದು ಮಹೇಶ್​ಗೆ ನಂಬಿಸಿದ್ದರು. 2017ರ ಮೇನಿಂದ 2020ರ ಮಾರ್ಚ್ ವರೆಗೂ ಹಂತಹಂತವಾಗಿ 2.10 ಕೋಟಿ ರೂ. ಕೊಟ್ಟಿದ್ದಾರೆ. ಆದರೆ, ಚೊಂಬು ಮಾತ್ರ ಕೊಟ್ಟಿರಲಿಲ್ಲ. ಅಲ್ಲದೆ, ದುಬಾರಿ ಬೆಲೆಗೆ ಮಾರಾಟ ಮಾಡಿಸಿ ಅಸಲು ಅಥವಾ ಲಾಭಾಂಶವನ್ನು ಕೊಡಿಸಿರಲಿಲ್ಲ. ಹೀಗಾಗಿ ಹಣ ವಾಪಸ್ ಕೊಡುವಂತೆ ಮಹೇಶ್ ಒತ್ತಾಯಿಸಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದರು. ಕೊನೆಗೆ ಮಾರತ್ತಹಳ್ಳಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹೊಸೂರಿಗೆ ಹೋಗಿ ಜೂ. 14ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮ್ಮನ ಮಗಳ ಪತಿಯೊಂದಿಗೆ ಲಾಡ್ಜ್​ಗೆ ಹೋದ ಮಹಿಳೆ: ಸಂಜೆ ರೂಂ ತೆರೆದು ನೋಡಿದವರಿಗೆ ಕಾದಿತ್ತು ಶಾಕ್​

ಪೊಲೀಸರ ವಿರುದ್ಧ ಟ್ವಿಟರ್​ನಲ್ಲಿ ದೂರು

ವಂಚನೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ ಮಾರತ್ತಹಳ್ಳಿ ಪೊಲೀಸರ ವಿರುದ್ಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ಗೆ ಟ್ವಿಟರ್​ನಲ್ಲಿ ಆರೋಪಿಯ ಸಂಬಂಧಿಕರು ದೂರು ನೀಡಿದ್ದಾರೆ. ಸುಳ್ಳು ಕೇಸಿನಲ್ಲಿ ಅಮಾಯಕರನ್ನು ಬಂಧಿಸಿ, ಬಿಡುಗಡೆ ಮಾಡಲು 35 ಲಕ್ಷ ರೂ.ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿದ್ದಾರೆ. ತನಿಖೆ ಹೊಣೆಯನ್ನು ಹೆಚ್ಚುವರಿ ಆಯುಕ್ತ ಮುರುಗನ್​ಗೆ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net