

ಬೆಂಗಳೂರು: ಕ್ರಿಕೆಟ್, ಕಬ್ಬಡಿ, ಬ್ಯಾಡ್ಮಿಂಟನ್ ಲೀಗ್ ಹೀಗೆ ಅನೇಕ ಲೀಗ್ಗಳ ಜತೆಗೆ ಇದೀಗ ಬೌಲಿಂಗ್ ಲೀಗ್ ಕೂಡ ಸದ್ದು ಮಾಡುತ್ತಿದೆ. ಸ್ಯಾಂಡಲ್ವುಡ್ನಲ್ಲಿ ಬೌಲಿಂಗ್ ಲೀಗ್ ಸೀಸನ್ 1 ಯಶಸ್ವಿಯಾದ ಬೆನ್ನಲ್ಲೇ ಇದೀಗ 2ನೇ ಲೀಗ್ಗೆ ತಾರೆಯರು ಸಜ್ಜಾಗಿದ್ದಾರೆ.
ಅಂದಹಾಗೆ ಬೌಲಿಂಗ್ ಲೀಗ್ ಅನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದು ನಿರ್ಮಾಪಕ ಕಮರ್. ಕಳೆದ ವರ್ಷ ಬೌಲಿಂಗ್ ಲೀಗ್ ಯಶಸ್ವಿಯಾಗಿ ನಿಭಾಯಿಸಿದ್ದ ಕಮರ್, ಈ ಬಾರಿ ಕೂಡ ಅದೇ ಹುರುಪಿನಲ್ಲಿ ಲೀಗ್ ಮಾಡಲು ಮುಂದಾಗಿದ್ದಾರೆ. ಈ ವಿಚಾರವಾಗಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿಯರಾದ ಕಾರುಣ್ಯಾ ರಾಮ್, ಧನ್ಯಾ ರಾಮ್ ಕುಮಾರ್, ರಕ್ಷಿತಾ ಶೆಟ್ಟಿ, ರಚನಾ ಇಂದರ್, ಬೃಂದಾ ಆಚಾರ್ಯ, ಸಾಕ್ಷಿ ಜತೆಗೆ ನಟರಾದ ತರುಣ್ ಚಂದ್ರ, ಕೆಂಪೆಗೌಡ, ಭರತ್ ಸೇರಿದಂತೆ ಅನೇಕರು ಹಾಜರಿದ್ದರು. ಈ ಬಾರಿಯ ಲೀಗ್ನಲ್ಲಿ ಒಟ್ಟು ಆರು ತಂಡಗಳಿರಲಿದ್ದು, ತಾರೆಯರೊಟ್ಟಿಗೆ ಪತ್ರಕರ್ತರು ಕೂಡ ಲೀಗ್ನಲ್ಲಿ ಭಾವಹಿಸುತ್ತಿರುವುದು ವಿಶೇಷ.
ಕಳೆದ ಬಾರಿಯ ಲೀಗ್ನಲ್ಲಿ ಶ್ರೀನಗರ ಕಿಟ್ಟಿ ಮತ್ತು ತಂಡ ಜಯಭೇರಿಯಾಗಿತ್ತು. ಈ ಬಾರಿಯ ಬೌಲಿಂಗ್ ಲೀಗ್ ಕಪ್ ಯಾರ ಮುಡಿಗೇರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಡಿಸೆಂಬರ್ನಲ್ಲಿ ಲೀಗ್ ಪ್ರಾರಂಭವಾಗಲಿದೆ ಎಂದು ಹೇಳಲಾಗಿದ್ದು, ಎರಡು ದಿನಗಳು ನಡೆಯಲಿದೆ. ಪಂದ್ಯದಲ್ಲಿ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ. ಇನ್ನು ಏನೆಲ್ಲ ವಿಶೇಷತೆ ಇರಲಿದೆ, ಯಾರೆಲ್ಲ ಕಲಾವಿದರು ಭಾಗಿಯಾಗುತ್ತಾರೆ ಎನ್ನುವ ಬಗ್ಗೆ ಸದ್ಯದಲ್ಲೇ ಮಾಹಿತಿ ಬಹಿರಂಗ ಪಡಿಸಲಿದೆ ಕಮರ್ ಫಿಲ್ಮ್ ಫ್ಯಾಕ್ಟರಿ.