ಮಹಿಳೆಯರಿಬ್ಬರ ಚಿನ್ನಾಭರಣ ಕಳವು

Published on

ತಿ.ನರಸೀಪುರ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಕಳ್ಳರು ಮಹಿಳೆಯರಿಬ್ಬರ ಲಕ್ಷಾಂತರ ರೂ.ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.


ಕೊಳ್ಳೇಗಾಲ ತಾಲೂಕು ಪಾಳ್ಯ ಹೋಬಳಿಯ ಉಗನಿ ಗ್ರಾಮದ ಮಹಿಳೆ ಸುಂದ್ರಮ್ಮ ಹಾಗೂ ತಿ.ನರಸೀಪುರ ತಾಲೂಕು ಕೊತ್ತೇಗಾಲ ಗ್ರಾಮದ ನೇತ್ರಾ ಚಿನ್ನಾಭರಣ ಕಳೆದುಕೊಂಡವರು.


ಸುಂದ್ರಮ್ಮ ಏ.1ರಂದು ಮಗಳನ್ನು ನೋಡಲು ನಂಜನಗೂಡಿಗೆ ತೆರಳಿ ವಾಪಸ್ ಊರಿಗೆ ಹೋಗಲು ತಿ.ನರಸೀಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದರು. ನೇತ್ರಾ ಅವರು ಕೊತ್ತೇಗಾಲ ಗ್ರಾಮದ ತಂದೆಯ ಮನೆಯಿಂದ ಪತಿಯ ಮನೆ ಬೆಂಗಳೂರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದರು.
ಇಬ್ಬರು ಬಸ್ ಹತ್ತುವ ಸಂದರ್ಭದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿ ಸುಂದ್ರಮ್ಮರ ಬಳಿ ಇದ್ದ 56 ಗ್ರಾಂ ತೂಕದ 2 ಎಳೆ ಚಿನ್ನದ ಸರ ಹಾಗೂ ನೇತ್ರಾ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 20 ಗ್ರಾಂ ತೂಕದ ಕತ್ತಿನ ಚೈನ್ ಹಾಗೂ 15 ಗ್ರಾಂ ತೂಕದ ಕಿವಿಯೋಲೆ, ಮಾಟಿಗಳನ್ನು ಕಳವು ಮಾಡಿದ್ದಾರೆ.


ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಗೆ ಸುಂದ್ರಮ್ಮ ಹಾಗೂ ನೇತ್ರಾ ಪ್ರತ್ಯೇಕವಾಗಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಎಸ್‌ಐ ಭಾನುಪ್ರಕಾಶ್ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net