ಗಡಿ ಬಂದ್, ಶಾಲೆ ಓಪನ್: ಕರೊನಾ ಕಟ್ಟೆಚ್ಚರ, ಎಂಟು ಜಿಲ್ಲೆಗಳು ವಾರಾಂತ್ಯ ಲಾಕ್; 23ರಂದು ಆರಂಭ 9, 10, ಪಿಯು ತರಗತಿ

Front
ಕರೊನಾ ನಿರ್ವಹಣೆ, ಶಾಲೆ-ಕಾಲೇಜು ತೆರೆಯುವುದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆಯಿತು. ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಾ.ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ತಜ್ಞರಾದ ಡಾ.ಸಿ.ಎನ್. ಮಂಜುನಾಥ್ ಉಪಸ್ಥಿತರಿದ್ದರು.
Published on

ಬೆಂಗಳೂರು: ಕರೊನಾ ಮೂರನೇ ಅಲೆಗೆ ತಡೆಯೊಡ್ಡುವ ಉದ್ದೇಶದಿಂದ ಕೇರಳ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂವನ್ನು ಶುಕ್ರವಾರ ರಾತ್ರಿಯಿಂದಲೇ ಜಾರಿಗೊಳಿಸಿರುವ ಸರ್ಕಾರ, 9, 10 ಹಾಗೂ ಪಿಯು ತರಗತಿಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಜತೆಗೆ, ರಾಜ್ಯಾದ್ಯಂತ ಅನ್ವಯಿಸುವಂತೆ ರಾತ್ರಿ ಕರ್ಫ್ಯೂ ಅವಧಿ ಹೆಚ್ಚಿಸಲಾಗಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರೊನಾ ನಿರ್ವಹಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಉನ್ನತಮಟ್ಟದ ಸಭೆ ನಡೆಯಿತು. ಕೇರಳ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡವು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸೋಂಕು ದೃಢತೆ ಪ್ರಮಾಣ ಶೇ.2ರ ಆಸುಪಾಸಿನಲ್ಲಿ ಇರುವ ಬಗ್ಗೆ ಗಂಭೀರ ಚರ್ಚೆ ನಡೆಸಿತು. ತಜ್ಞರ ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆಗಳನ್ನು ಪರಾಮಶಿಸಿತು. ಅಲ್ಲದೆ, ಶಾಲೆ- ಕಾಲೇಜುಗಳು ಪುನರಾರಂಭದ ಕುರಿತು ಸಮಾಲೋಚಿಸಿತು.

ವೀಕೆಂಡ್ ಕರ್ಫ್ಯೂಗೆ ಸಹಮತ: ಪರಿಸ್ಥಿತಿ ಕೈಮೀರದಂತೆ ತಡೆಯಲು ಕೇರಳ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ತಲಾ ನಾಲ್ಕು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಲು ನಿರ್ಧರಿಸಿದ್ದು, ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಜಾರಿಯಲ್ಲಿರಲಿದೆ ಎಂದು ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯಾದ್ಯಂತ ಈಗ ಜಾರಿಯಲ್ಲಿರುವ ಕರ್ಫ್ಯೂ ಅವಧಿಯನ್ನು (ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ) ಒಂದು ತಾಸು ಹೆಚ್ಚಿಸಿದ್ದು, ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಇರಲಿದೆ.

ಕಾರ್ಯಪಡೆ ರಚನೆ: ರಾಜ್ಯಮಟ್ಟದ ಕರೊನಾ ಕಾರ್ಯಪಡೆಯನ್ನು ಒಂದೆರಡು ದಿನಗಳಲ್ಲಿ ರಚಿಸಲಾಗುವುದು.ಈ ವಿಷಯದಲ್ಲಿ ವಿಳಂಬವಾಗದೆಂದು ಬೊಮ್ಮಾಯಿ ಸ್ಪಷ್ಟಪಡಿಸಿದರು. ಕರೊನಾ ನಿರ್ವಹಣೆಯ ಉಪಕ್ರಮಗಳು ಮತ್ತು ಅಗತ್ಯ ಖರೀದಿಗಳ ವಿಷಯದಲ್ಲಿ ತ್ವರಿತ ನಿರ್ಧಾರ ಮತ್ತು ಅನುಷ್ಠಾನದ ದೃಷ್ಟಿಯಿಂದ ಕಾರ್ಯಪಡೆ ಪಾತ್ರ ಮಹತ್ವದ್ದಾಗಿದೆ.

ಕರ್ಫ್ಯೂ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಸೋಂಕು ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಜನರು ಕೂಡ ಸಹಕರಿಸಬೇಕು. | ಬಸವರಾಜ ಬೊಮ್ಮಾಯಿ, ಸಿಎಂ

ವಾರಾಂತ್ಯ ಕರ್ಫ್ಯೂ ನಿಯಮ

(8 ಜಿಲ್ಲೆಗಳಿಗೆ ಮಾತ್ರ ಅನ್ವಯ)

  • ಪಡಿತರ ಅಂಗಡಿ, ದಿನಸಿ ಅಂಗಡಿ, ಮಿಲ್ಕ್ ಬೂತ್, ಮಾಂಸದಂಗಡಿ, ಜಾನುವಾರು ಮೇವು, ತರಕಾರಿ, ಹಣ್ಣುಗಳ ಮಾರಾಟ ಮಳಿಗೆಗಳಿಗೆ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಅವಕಾಶ
  • ಮದುವೆ ಕಾರ್ಯಕ್ರಮಗಳಿಗೆ 100 ಜನರ ಮಿತಿ, ಮುನ್ನೆಚ್ಚರಿಕೆ ಕ್ರಮ ಪಾಲನೆ ಕಡ್ಡಾಯ.
  • ಅಂತ್ಯಸಂಸ್ಕಾರಗಳಿಗೆ 20 ಜನರ ಮಿತಿ
  • ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿ, ಒಬ್ಬ ಸಹಾಯಕರಿಗೆ ಓಡಾಡಲು ಅನುಮತಿ.
  • ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್ ಮಾತ್ರ ನೀಡಲು ಅವಕಾಶ
  • ಹೋಂ ಡೆಲಿವರಿಗೆ ದಿನದ 24 ತಾಸು ವಿನಾಯಿತಿ
  • ರೈಲು, ವಿಮಾನ ಸಂಚಾರಕ್ಕೆ ಅವಕಾಶ. ಸೂಕ್ತ ಟಿಕೆಟ್ ಹೊಂದಿರಬೇಕು
  • ತುರ್ತು ಮತ್ತು 24 ತಾಸು ನಿರ್ವಹಣೆಯಾಗುವ ಕೈಗಾರಿಕೆಗಳು ಮತ್ತು ಕಂಪನಿಗಳು, ಸಂಸ್ಥೆಗಳಿಗೆ ಅನುಮತಿ, ಸಿಬ್ಬಂದಿ ಸೂಕ್ತ ಗುರುತಿನ ಚೀಟಿಯೊಂದಿಗೆ ಓಡಾಡಲು ಅವಕಾಶ
  • ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವುದು.
  • ಜನರ ಓಡಾಟಕ್ಕೆ ಪೂರ್ಣ ನಿರ್ಬಂಧ
  • ಮದ್ಯದಂಗಡಿಗಳಲ್ಲಿ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಪಾರ್ಸಲ್​ಗೆ ಮಾತ್ರ ಅವಕಾಶ

ದಿನ ಬಿಟ್ಟು ದಿನ ತರಗತಿ

ಕರೊನಾ ನಿಯಂತ್ರಣ, ತಜ್ಞರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದಲ್ಲಿ 9, 10ನೇ ತರಗತಿ ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ಆ.23ರಿಂದ ಆರಂಭಿಸಲು ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ. ವಿದ್ಯಾರ್ಥಿಗಳ ದಟ್ಟಣೆ, ಗುಂಪುಗೂಡುವುದನ್ನು ತಡೆಯಲೆಂದು ದಿನ ಬಿಟ್ಟು ದಿನ ತರಗತಿ ನಡೆಸಲು ಸೂಚಿಸಲಾಗಿದೆ. ವಿಸõತ ಪ್ರಮಾಣಿತ ಕಾರ್ಯವಿಧಾನವನ್ನು ಹೊರಡಿಸಲಾಗುವುದು. ನಂತರ ಕರೊನಾ ಪರಿಸ್ಥಿತಿ ಅವಲೋಕಿಸಿ ಪ್ರಾಥಮಿಕ ಶಾಲೆಗಳು ಹಾಗೂ 6 ರಿಂದ 8ನೇ ತರಗತಿ ಶಾಲೆಗಳನ್ನು ತೆರೆಯುವ ಬಗ್ಗೆ ಆಗಸ್ಟ್ ಅಂತ್ಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಕ್ಕೆ ಉನ್ನತಮಟ್ಟದ ಸಭೆ ಸಮ್ಮತಿಸಿದೆ ಎಂದು ಸಿಎಂ ವಿವರಿಸಿದರು.

ವಾರಾಂತ್ಯ ಕರ್ಫ್ಯೂ ಎಲ್ಲೆಲ್ಲಿ?

ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಬೆಳಗಾವಿ, ವಿಜಯಪುರ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳು.

ಇಡೀ ರಾಜ್ಯಕ್ಕೆ ಅನ್ವಯ

  • ಮನೆಗಳಲ್ಲಿ ಕಾರ್ಯಕ್ರಮ, ಮದುವೆಗಳಿಗೆ ಅವಕಾಶವಿದೆ. 100 ಜನರ ಮಿತಿ ಮೀರುವಂತಿಲ್ಲ
  • ದೇವಸ್ಥಾನ, ಚರ್ಚ್, ಮಸೀದಿ ಸೇರಿ ಧಾರ್ವಿುಕ ಕೇಂದ್ರಗಳು ತೆರೆಯಬಹುದು, ದರ್ಶನಕ್ಕಷ್ಟೇ ಅವಕಾಶ. ಜಾತ್ರೆ, ಉತ್ಸವ, ಸಭೆ, ಸಮಾವೇಶ, ಮೆರವಣಿಗೆ ಮಾಡುವಂತಿಲ್ಲ
  • ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ವಿುಕ, ಮನರಂಜನೆ, ಕ್ರೀಡೆ, ಸಮಾವೇಶ ಸೇರಿದಂತೆ ಜನರು ದೊಡ್ಡ ಪ್ರಮಾಣದಲ್ಲಿ ಸೇರುವ ಚಟುವಟಿಕೆಗಳಿಗೆ ಕಡ್ಡಾಯ ನಿರ್ಬಂಧ
  • ನೈಟ್ ಕರ್ಫ್ಯೂ ವೇಳೆ ಜನರ ಓಡಾಟಕ್ಕೆ ಕಡ್ಡಾಯ ನಿಷೇಧ
  • ಬಸ್ಸು, ರೈಲು, ವಿಮಾನಯಾನ ಮುಕ್ತ. ಈ ನಿಲ್ದಾಣಗಳಿಗೆ ವಾಹನದಲ್ಲಿ ಸೂಕ್ತ ಟಿಕೆಟ್​ನೊಂದಿಗೆ ಹೋಗಿ ಬರಲು ಅವಕಾಶ. ಸರಕು ತುಂಬಿದ ಮತ್ತು ಖಾಲಿ ಟ್ರಕ್, ಎಲ್ಲ ವಿಧದ ಗೂಡ್ಸ್ ಕ್ಯಾರಿಯರ್​ಗಳ ಸಂಚಾರ ಮುಕ್ತ
  • ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿ ಮತ್ತು ಅವರ ಸಹಾಯಕರಿಗೆ ಆಸ್ಪತ್ರೆಗೆ ಹೋಗಿಬರಲು ಅನುಮತಿ
  • ರಾತ್ರಿ ಪಾಳಿಯಲ್ಲೂ ಕಾರ್ಯನಿರ್ವಹಿಸುವ ನೌಕರರು ಗುರುತಿನ ಚೀಟಿಯೊಂದಿಗೆ ಓಡಾಡಬಹುದು.
  • ಔಷಧ ಅಂಗಡಿಗಳಿಗೆ ಮುಕ್ತ ಅವಕಾಶ, ಇ ಕಾಮರ್ಸ್ ಕಂಪನಿ ಪ್ರತಿನಿಧಿಗಳಿಂದ ಹೋಂ ಡೆಲಿವರಿಗೆ ಅಸ್ತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net