

ಕೋಲಾರ: ಶಾಸಕರ ಬೆಂಬಲಿಗರ ಕಿರುಕುಳದಿಂದ ಬೇಸತ್ತು ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೊಂದು ನಡೆದಿದೆ. ಕೋಲಾರ ತಾಲೂಕು ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾ ಬಾಬು ಆತ್ಮಹತ್ಯೆಗೆ ಯತ್ನಿಸಿದವರು.
ಕೋಲಾರ ಶಾಸಕ ಶ್ರೀನಿವಾಸ ಗೌಡ ಹಾಗೂ ಗ್ರಾಮಪಂಚಾಯಿತಿ ಉಪಾಧ್ಯಕ್ಷ ನಾಗೇಶ್ ಹಾಗೂ ವಿಜಯಕುಮಾರ್ ಅವರ ಬೆಂಬಲಿಗರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಇವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಶಾಸಕರು ಮತ್ತು ಗ್ರಾಮಪಂಚಾಯತ್ ಉಪಾಧ್ಯಕ್ಷರ ಬೆಂಬಲಿಗರು ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಕುರಿತು ಪುಷ್ಪಾ ಡೆತ್ನೋಟ್ನಲ್ಲಿ ಬರೆದಿಟ್ಟು, ನಿದ್ರೆ ಮಾತ್ರೆ ಸೇವಿಸಿದ್ದಾರೆ. ವಿಷಯ ತಿಳಿದು ಅವರನ್ನು ತಕ್ಷಣ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.