

ಮುಂಬೈ: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಸಂಘದ ಬೆಂಬಲಿಗ ಅಬು ಫೈಸಲ್ ಎಂಬಾತ ಮಾಡಿರುವ ವೀಡಿಯೋಗಳನ್ನು ಕೂಡಲೇ ಬ್ಲಾಕ್ ಮಾಡಿ ಎಂದು ಬಾಂಬೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಈತನ ವಿರುದ್ಧ ಇಮ್ರಾನ್ ಖಾನ್ ಎನ್ನುವವರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮುಸ್ಲಿಮೇತರ ವೈದ್ಯರ ಮೇಲೆ ಹಲ್ಲೆ ನಡೆಸುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾನೆ. ಸಾಲದು ಎಂಬುದಕ್ಕೆ ಭಾರತದಲ್ಲಿ ಕರೊನಾ ವೈರಸ್ ಹರಡಲು ಮುಸ್ಲಿಮರೇ ಕಾರಣ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದಾಗಿ ಹೇಳಿಕೆ ನೀಡಿರುವ ಆತ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಿಸಲು ಆರ್ಎಸ್ಎಸ್ ಪ್ರಯತ್ನ ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ಅದು ಅಭಿಯಾನ ಶುರು ಮಾಡಿದೆ ಎಂಬ ಹೇಳಿಕೆಯನ್ನೂ ನೀಡಿದ್ದಾನೆ. ಎಐಎಂಐಎಂ ಬೆಂಬಲಿಗ ಎಂದು ಹೇಳಿಕೊಳ್ಳುತ್ತಿರುವ ಈತ ಫೇಸ್ಬುಕ್, ವಾಟ್ಸ್ಆ್ಯಪ್, ಯೂಟ್ಯೂಬ್ ಸೇರಿದಂತೆ ಜಾಲತಾಣಗಳಲ್ಲಿ ವೀಡಿಯೋ ಕ್ಲಿಪ್ಪಿಂಗ್ ಹರಿಬಿಟ್ಟು, ದ್ವೇಷ ಭಾಷಣ ಮಾಡುತ್ತಿದ್ದಾನೆ ಎಂದು ಖಾನ್ ದೂರಿದ್ದಾರೆ.
ಈ ವೀಡಿಯೋ ನೋಡಿದ ಕೆಲವು ಜನರು ಅದನ್ನು ನಿಜವೆಂದು ನಂಬುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಕೋಮು ಕಲಹ ಉಂಟಾಗುತ್ತಿದೆ. ಅಶಾಂತಿ ಸೃಷ್ಟಿಸುವ ಗುರಿಯನ್ನು ಅಬು ಹೊಂದಿದ್ದಾನೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಇಮ್ರಾನ್ ಖಾನ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಆಕ್ಷೇಪಾರ್ಹ ವೀಡಿಯೊವನ್ನು ಅಪ್ಲೋಡ್ ಮಾಡಿರುವ ಅಬು ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸುವಂತೆ ಹಾಗೂ ಸಾಮಾಜಿಕ ಜಾಲತಾಣದಿಂದ ಆತನನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಖಾನ್ ಕೋರಿದ್ದಾರೆ.
ಈತ ಹೇಳಿರುವ ವೀಡಿಯೋಗಳನ್ನು ಆಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಾದ ಆರ್.ಡಿ.ಧನುಕಾ ಮತ್ತು ಅಭಯ್ ಅಹುಜಾ ಅವರನ್ನೊಳಗೊಂಡ ನ್ಯಾಯಪೀಠವು ಆದೇಶಿಸಿದೆ. ಜತೆಗೆ, ಒಂದು ವೇಳೆ ಅರ್ಜಿದಾರರು ಆರೋಪಿಸಿರುವಂತೆ ಕೋಮು ಘರ್ಷಣೆಗೆ ಕಾರಣವಾಗಿರುವ ಹೇಳಿಕೆಗಳು ಅದರಲ್ಲಿ ಇದ್ದರೆ, ಆತನ ವಿರುದ್ಧ ತನಿಖೆ ನಡೆಸುವಂತೆ ಕೋರ್ಟ್ ಹೇಳಿದೆ.
ಈ ನಿಟ್ಟಿನಲ್ಲಿ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ಒಂದು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ಹೇಳಿರುವ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದ್ದಾರೆ. (ಏಜೆನ್ಸೀಸ್)