

ಮುಂಬೈ: ಪಂಜಾಬಿ ಪ್ರಸಿದ್ಧ ಜಾನಪದ ಗಾಯಕ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಗುರ್ಮೀತ್ ಬಾವಾ ಅವರ ಪುತ್ರಿ ಗ್ಲೋರಿ ಬಾವಾ ಅವರು ಸರ್ಕಾರದಿಂದ ಸಹಾಯ ಕೋರಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಾವು ಆರ್ಥಿಕವಾಗಿ ಅನುಭವಿಸುತ್ತಿರುವ ತೊಂದರೆಯನ್ನು ಹಂಚಿಕೊಂಡಿದ್ದರು. ಇದನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಸಹಾಯ ಮಾಡಿದ್ದು, 25 ಲಕ್ಷ ರೂಪಾಯಿಯನ್ನು ಕಳುಹಿಸಿದ್ದಾರೆ.
ಅಕ್ಷಯ್ ಕುಮಾರ್ ಅವರು ಮಾಡಿರುವ ಸಹಾಯದ ಬಗ್ಗೆ ಹಂಚಿಕೊಂಡಿರುವ ಗ್ಲೋರಿ ಬಾವಾ, ಇದರ ಬಗ್ಗೆ ಹೇಳಲು ನನ್ನ ಬಳಿ ಪದಗಳಿಲ್ಲ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಖಂಡಿತವಾಗಿಯೂ ಸಹಾಯವಾಗಿದೆ. ಆದರೆ ನನಗೆ ಕೆಲಸ ಬೇಕು ಮತ್ತು ನಾನು ಅದನ್ನು ಕೇಳುತ್ತಿದ್ದೇನೆ. ಕೆಲಸ ಸಿಕ್ಕರೆ ಮಾತ್ರ ನಮ್ಮಂತಹ ಕಲಾವಿದರು ಏನನ್ನಾದರೂ ಗಣನೀಯವಾಗಿ ಸಾಧಿಸಲು ಸಾಧ್ಯ ಎಂದು ಹೇಳಿದ್ದಾರೆ.
ಇನ್ನೂ ಈ ಬಗ್ಗೆ ನಟ ಅಕ್ಷಯ್ ಕುಮಾರ್, ಪಂಜಾಬ್‌ನ ಹೆಮ್ಮೆಯ ಗುರ್ಮೀತ್ ಬಾವಾ ಅವರ ಕುಟುಂಬ ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮದಿಂದ ನಾನು ತಿಳಿದುಕೊಂಡೆ.ಗುರ್ಮೀತ್ ಬಾವಾ ಅವರ ಕುಟುಂಬ ಆರ್ಥಿಕ ಸಮಸ್ಯೆಯಿಂದ ತತ್ತರಿಸುತ್ತಿರುವುದನ್ನು ನೋಡಿ ಬೇಸರವಾಯಿತು. ಗ್ಲೋರಿ ಬಾವಾ ಅವರನ್ನು ನನ್ನ ಸಹೋದರಿ ಎಂದು ಪರಿಗಣಿಸಿ ಪ್ರೀತಿಯಿಂದ ನೀಡಿದ್ದೇನೆ ಹೊರತು ಇದು ಯಾವುದೇ ಸಹಾಯವಲ್ಲ. ಕಲಾವಿದನಾಗಿ ಇದು ನನ್ನ ಕರ್ತವ್ಯ.ಎಂದು ಹೇಳಿದ್ದಾರೆ. (ಏಜೆನ್ಸೀಸ್)