ನವದೆಹಲಿ: ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ತೀಸ್ ಹಜಾರಿ ನ್ಯಾಯಾಲಯ ಜುಲೈ 16ರವರೆಗೆ ವಿಸ್ತರಿಸಿದೆ.
ಬಿಭವ್ ಕುಮಾರ್ ಅವರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ಗೋಯಲ್ ಅವರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶನಿವಾರ (ಜುಲೈ6) ಹಾಜರುಪಡಿಸಲಾಗಿದ್ದು, ಅವರು ಜುಲೈ 16ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದಾರೆ.
ಇದನ್ನು ಓದಿ: NEET-UG ಕೌನ್ಸೆಲಿಂಗ್ ಮುಂದೂಡಿಕೆ; ಹೊಸ ದಿನಾಂಕ ಯಾವಾಗ.. ಇಲ್ಲಿದೆ ಮಾಹಿತಿ
ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಹೋಗಿದ್ದ ಸಮಯದಲ್ಲಿ, ಮೇ 13ರಂದು ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಬಿಭವ್ ಕುಮಾರ್ ಅವರನ್ನು ಮೇ 18ರಂದು ಬಂಧಿಸಲಾಯಿತು. ಮ್ಯಾಜಿಸ್ಟ್ರಿಯಲ್ ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿತು. ಮೇ 24ರಂದು ಬಿಭವ್ ಅವರನ್ನು ನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ವರ್ಗಾಯಿಸಲಾಯಿತು. ನಂತರ ಅವರನ್ನು ಮತ್ತೊಮ್ಮೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಯಿತು.
ತೀಸ್ ಹಜಾರಿ ನ್ಯಾಯಾಲಯವು ಬಿಭವ್ ಕುಮಾರ್ ಅವರ ಮೊದಲ ಜಾಮೀನು ಅರ್ಜಿಯನ್ನು ಮೇ 27ರಂದು ಮತ್ತು ಎರಡನೇ ಜಾಮೀನು ಅರ್ಜಿಯನ್ನು ಜೂನ್ 7ರಂದು ತಿರಸ್ಕರಿಸಿತ್ತು. ಈ ಪ್ರಕರಣದ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಸಂತ್ರಸ್ತೆಯ ಸುರಕ್ಷತೆಯ ಬಗ್ಗೆ ಚಿಂತಿಸಲಾಗಿದೆ ಎಂದು ತೀಸ್ ಹಜಾರಿ ಕೋರ್ಟ್ ಹೇಳಿತ್ತು. (ಏಜೆನ್ಸೀಸ್)
ರಾಷ್ಟ್ರಪತಿ ಭವನ; 14 ಹುತಾತ್ಮರು ಸೇರಿ 36 ಸೈನಿಕರಿಗೆ ಕೀರ್ತಿ ಮತ್ತು ಶೌರ್ಯ ಚಕ್ರ ಪ್ರದಾನ