

ಮುಂಬೈ: ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ದೇಶಾದ್ಯಂತ ಜೂನ್ 27ರಂದು ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯಾದಗಿನಿಂದ ಬ್ಲಾಕ್‌ಬಸ್ಟರ್ ಹಿಟ್ನೊಂದಿಗೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಲೆಕ್ಷನ್ನೊಂದಿಗೆ ಮುನ್ನಡೆಯುತ್ತಿದೆ. ಒಂದು ವಾರದಲ್ಲಿ ವಿಶ್ವದಾದ್ಯಂತ ಸುಮಾರು 700 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಮತ್ತು ಕಮಲ್ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರಷ್ಟೇ ಅಲ್ಲದೆ ಸಿನಿಮಾರಂಗದ ಪ್ರಮುಖರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬೇರೆ ಬೇರೆ ಇಂಡಸ್ಟ್ರಿಯಿಂದ ನೇಮ್ ವಿತ್ ಫೇಮ್ ಇರುವಂತಹ ಸ್ಟಾರ್ಸ್ಗಳನ್ನು ಕರೆತಂದು ಸಿನಿಮಾ ಮಾಡಿದರು, ಚಿತ್ರೀಕರಣದ ವೇಳೆ ಯಾವುದೇ ನೆಗೆಟಿವ್ ಸುದ್ದಿಗಳನ್ನು ಹೊರಬರದಂತೆ ನೋಡಿಕೊಂಡಿರುವುದು ನಿರ್ದೇಶಕ ನಾಗ್ ಅಶ್ವಿನ್ ಅವರ ಮತ್ತೊಂದು ಸಾಧನೆಯಾಗಿದೆ. ಸಿನಿಮಾದಲ್ಲಿ ಪ್ರಭಾಸ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಕೂಡ ಅಮಿತಾಭ್ ಅವರ ಶಕ್ತಿಶಾಲಿ ಅವತಾರವನ್ನು ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ ಮತ್ತು ಅವರನ್ನು ಹೊಗಳುತ್ತಿದ್ದಾರೆ.
ಈ ರೀತಿಯ ದೃಶ್ಯಗಳು ನಟ ಪ್ರಭಾಸ್ ಅವರ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆ ಎಂಬ ಪ್ರಶ್ನಗೆ, ಪಿಂಕ್ವಿಲಾಗೆ ನೀಡಿರುವ ಸಂದರ್ಶನದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಉತ್ತರಿಸಿದ್ದಾರೆ. ಸಿನಿಮಾ ನಿರ್ಮಾಣದ ಸಮಯದಲ್ಲಿ ಪ್ರಭಾಸ್ ಯಾವಾಗಲೂ ಬೆಂಬಲ ನೀಡುತ್ತಿದ್ದರು. ನಮ್ಮ ನಡುವೆ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಅವರ ಸ್ಟಾರ್ಡಮ್ಗೆ ಇಂಥಾ ವಿಷಯಗಳು ಸಮಸ್ಯೆಯಾಗಬೇಕಿತ್ತು. ಆದರೆ ಒಮ್ಮೆ ಕಥೆ ಕೇಳಿ ಓಕೆ ಎಂದರೆ ಅವರು ಸ್ಟೋರಿ ಕಡೆಗೆ ಸಂಪೂರ್ಣವಾಗಿ ನಿಂತಿರುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಆ್ಯಕ್ಷನ್ ಸೀಕ್ವೆನ್ಸ್‌ಗಳಲ್ಲಿ ಅಮಿತಾಭ್ ಪ್ರಭಾಸ ಅವರನ್ನು ಹೊಡೆಯುವುದನ್ನು ಗಮನಿಸಬಹುದು, ಈ ಬಗ್ಗೆಯೂ ಮಾತನಾಡಿದ ನಿರ್ದೇಶಕ ನಾಗ್ ಅಶ್ವಿನ್, ಯಾವುದೇ ಮುಖ್ಯವಾಹಿನಿಯ ನಟನಿಗೆ ತೆರೆಯ ಮೇಲೆ ಇನ್ನೊಬ್ಬ ನಟ ಹೊಡೆಯುವುದು ದೊಡ್ಡ ವಿಷಯವಾಗಿದೆ. ಇಂದಿನ ಕಾಲದಲ್ಲಿ ನಟರನ್ನು ಮುಟ್ಟುವುದು ಕಷ್ಟ, ಇದು ದೊಡ್ಡ ವಿಷಯ. ಆದರೆ ಚಿತ್ರೀಕರಣದಲ್ಲಿ ನನಗೆ ಇದು ತುಂಬಾ ಸಹಜವಾಗಿಯೇ ಇತ್ತು. ಫೈಟಿಂಗ್ ಸೀನ್ಗಳಲ್ಲಿ ಪ್ರಭಾಸ್ ಅವರು ಅಮಿತಾಭ್ ಬಚ್ಚನ್ ಅವರಿಂದ ಸೋಲಲು ಬಯಸಿದ್ದರು. ಅಲ್ಲದೆ ಈ ದೃಶ್ಯದ ಸಮಯದಲ್ಲಿ ಪ್ರಭಾಸ್ ಅವರು ಅಮಿತಾಭ್ ಅವರಿಗೆ 'ಸರ್, ನನ್ನನ್ನು ತುಂಬಾ ಬಿಗಿಯಾಗಿ ಹಿಡಿದುಕೊಳ್ಳಿ' ಎಂದು ಹೇಳುತ್ತಿದ್ದರು. ಇದು ತುಂಬಾ ಖುಷಿ ತಂದಿತು ಎಂದು ಹೇಳಿದ್ದಾರೆ.
ಅಮಿತಾಭ್ ಅವರು ಕೂಡ ಹಿರಿಯ ನಟನಾಗಿದ್ದರು ಇಂತಹ ಪ್ರಯೋಗಗಳಿಗೆ ಬೆಂಬಲಿಸಿದರು ಎಂದು ನಿರ್ದೇಶಕ ನಾಗ್ ಅಮಿತಾಭ್ ಅವರನ್ನು ಹೊಗಳಿದ್ದಾರೆ. ಈ ಹಿಂದೆ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಭಾಸ್ ಕೂಡ ಅಮಿತಾಭ್ ಅವರನ್ನು ಹೊಗಳಿದ್ದರು. ಉತ್ತರದಿಂದ ಬಂದಿರುವ ಅಮಿತಾಭ್ ಸರ್ ದಕ್ಷಿಣದಲ್ಲಿಯೂ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಇದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು ಎಂದು ಹೇಳಿದ್ದರು. (ಏಜೆನ್ಸೀಸ್)