

ಮುಂಬೈ: ಸಿನಿಮಾ ರಂಗ ಅಂದರೆ ಹಾಗೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಕೊಡುತ್ತಿರುವ ಸಮಯದಲ್ಲಿ ಇವರೇ ನಮ್ಮ ಚಿತ್ರಕ್ಕೆ ಬೇಕು, ಈ ನಟ ಅಥವಾ ನಟಿಯೇ ನಮ್ಮ ಚಿತ್ರದಲ್ಲಿ ಅಭಿನಯಿಸಬೇಕು ಎಂದು ಆಫರ್ ಮುಂದಿಡುತ್ತಿದ್ದ ನಿರ್ದೇಶಕ, ನಿರ್ಮಾಪಕರಿಗೆ ದಿಢೀರ್ ಚಿತ್ರರಂಗಕ್ಕೆ ಗುಡ್ಬೈ ಹೇಳುವ ಮೂಲಕ ಶಾಕ್ ಕೊಟ್ಟ ಸ್ಟಾರ್ಗಳು ಅನೇಕರು. ಅದರಲ್ಲೂ ಉತ್ತುಂಗದಲ್ಲಿ ನಟನೆ ತೊರೆದವರ ಪೈಕಿ ನಟಿಮಣಿಯರೇ ಹೆಚ್ಚು.
ಇದನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ
ಸ್ಟಾರ್ ನಟರಿಗೆ ಇವರೇ ನಾಯಕಿಯಾಗಿ ನಟಿಸಬೇಕು ಎಂಬ ಚಿತ್ರ ತಯಾರಕರ ಆಸೆ ನಿರಾಸೆಯಾಗುವುದು ಬಹುಬೇಡಿಕೆಯ ನಟಿಯರು ದಿಢೀರ್ ಎಂಬಂತೆ ಚಿತ್ರರಂಗದಿಂದ ದೂರವಾದಾಗ. ಈ ರೀತಿ ಆಗುವುದು ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಅಥವಾ ಇತರೆ ಕಾರಣಗಳಿಂದ ಸಿನಿಮಾಗಳಿಂದ ದೂರ ಉಳಿದಾಗ. ಇದರಿಂದ ಚಿತ್ರ ನಿರ್ದೇಶಕರಿಗೆ ಮಾತ್ರವಲ್ಲದೇ ಅವರ ಅಭಿಮಾನಿಗಳಿಗೂ ಭಾರೀ ಹತಾಶೆ ಮೂಡುತ್ತದೆ.
ಸದ್ಯ ಈ ಸಾಲಿನಲ್ಲಿ ನಟಿ ಅಸಿನ್ ಕೂಡ ಇದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ನ ಬಹುಬೇಡಿಕೆಯ ನಟಿಮಣಿಯರಲ್ಲಿ ಅಸಿನ್ ಹೆಸರು ಮುಂಚೂಣಿಯಲ್ಲಿತ್ತು. ಸ್ಟಾರ್ ನಟರಾದ ಅಮೀರ್, ಸಲ್ಮಾನ್, ಅಕ್ಷಯ್ ಅವರೊಂದಿಗೆ ಬ್ಯಾಕ್ ಟು ಬ್ಯಾಕ್ ಸೂಪರ್ಡೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟಿ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ನಟನೆಯನ್ನು ತೊರೆದರು, ಈ ಮುಖೇನ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದರು.
ಆಸಿನ್ 2008ರಲ್ಲಿ ಅಮೀರ್ ಖಾನ್ ಜತೆಗೆ 'ಗಜಿನಿ' (2008) ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಭಾರತದ ಬಾಕ್ಸ್ಆಫೀಸ್ನಲ್ಲಿ ಈ ಚಿತ್ರ ಬರೋಬ್ಬರಿ 100 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಾಣುವ ಮೂಲಕ ಅಧಿಕ ಹಣ ದಾಖಲಿಸಿದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಇದರೊಟ್ಟಿಗೆ ಅಂದು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾದ ಚಿತ್ರವು ಇದಾಗಿತ್ತು.
ಅನೇಕ ನಟಿಮಣಿಯರು ಯಶಸ್ವಿಯಾಗುವ ಭರವಸೆಯಲ್ಲಿ ಬಾಲಿವುಡ್ ಪ್ರವೇಶಿಸುತ್ತಾರೆ. ಕೆಲವರು ಮಾತ್ರ ಸೂಪರ್‌ಹಿಟ್ ನಟರು ಮತ್ತು ನಿರ್ದೇಶಕರೊಂದಿಗೆ ಕೆಲಸ ಮಾಡಿ, ಸೂಪರ್‌ಸ್ಟಾರ್‌ಗಳಾಗಿ ಹೊರಹೊಮ್ಮಿದರೆ, ಇನ್ನು ಕೆಲವರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿ, ಸ್ಟಾರ್ ಪಟ್ಟವನ್ನು ಅಲಂಕರಿಸಿ, ಇನ್ನೇನು ಹಲವಾರು ಉತ್ತಮ ಅವಕಾಶಗಳನ್ನು ತಮ್ಮನ್ನು ಅರಸಿ ಬರುತ್ತಿವೆ ಎನ್ನುವಷ್ಟರಲ್ಲೇ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ನಟನೆಯನ್ನು ತೊರೆಯುವ ನಿರ್ಧಾರ ಕೈಗೊಳ್ಳುತ್ತಾರೆ. ಇದೇ ರೀತಿ ನಿರ್ಧಾರ ಕೈಗೊಂಡಿದ್ದು ನಟಿ ಅಸಿನ್.
ಆಸಿನ್ ತೊಟ್ಟುಂಕಲ್ ದಕ್ಷಿಣ ಭಾರತದಲ್ಲಿ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡ ಬೆನ್ನಲ್ಲೇ ಹಲವಾರು ಆಫರ್ಗಳನ್ನು ಸ್ವೀಕರಿಸಿದರು. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್‌ರಂತಹ ಅನೇಕ ಸೂಪರ್‌ಸ್ಟಾರ್‌ಗಳೊಂದಿಗೆ ಒಂದರ ನಂತರ ಒಂದರಂತೆ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡುತ್ತ ಯಶಸ್ವಿಯಾದ ನಟಿ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತದನಂತರ ನಟನೆಯನ್ನು ತ್ಯಜಿಸಿ, ಕುಟುಂಬದತ್ತ ಗಮನ ಹರಿಸಲು ನಿರ್ಧರಿಸಿದರು.
ತಮಿಳು, ತೆಲುಗು ಚಿತ್ರಗಳಲ್ಲಿಯೂ ಕೆಲಸ ಮಾಡಿರುವ ಅಸಿನ್, ತರಬೇತಿ ಪಡೆದ ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದು, ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2001ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಸತ್ಯನ್ ಅಂತಿಕ್ಕಾಡ್ ಅವರ ಮಲಯಾಳಂ ಚಿತ್ರ 'ನರೇಂದ್ರನ್ ಮಕನ್ ಜಯಕಾಂತನ್ ವಕಾ' ಮೂಲಕ ದಕ್ಷಿಣ ಭಾರತದ ಚಲನಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿದರು.
ದಾಂಪತ್ಯ ಜೀವನದಲ್ಲಿ ಬ್ಯುಸಿಯಾದ ಆಸಿನ್ ಆಗಾಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕುಟುಂಬದೊಂದಿಗೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 2016ರಲ್ಲಿ ಆಸಿನ್ ಬಾಲಿವುಡ್‌ಗೆ ಮರಳುತ್ತಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ನಟಿ, ಮತ್ತೆ ಕ್ಯಾಮರಾ ಎದುರಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದರು,(ಏಜೆನ್ಸೀಸ್).