

ಮುಂಬೈ : ಕಳೆದ ಭಾನುವಾರ ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ಅವರು ತಮಗೆ ಕರೊನಾ ಸೋಂಕು ತಗುಲಿದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಮತ್ತೆ ಗುರುವಾರ ಎರಡು ಟೆಸ್ಟ್ಗಳಲ್ಲಿ ಕರೊನಾ ನೆಗೆಟೀವ್ ಬಂದಿರುವುದನ್ನು ತಿಳಿಸಿ, "ದೇವರು ಕರುಣೆ ತೋರಿದ್ದಾನೆ" ಎಂದರು.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದ ರಾಮ್ಪಾಲ್, ತಾವು ಇಷ್ಟು ಬೇಗ ಗುಣಮುಖರಾಗಿದ್ದಕ್ಕೆ ಮುಖ್ಯ ಕಾರಣ ತಾವು ಕರೊನಾ ಲಸಿಕೆಯ ಮೊದಲನೇ ಡೋಸ್ ಪಡೆದಿದ್ದುದು ಎಂದಿದ್ದಾರೆ. ಆದ್ದರಿಂದ ಎಲ್ಲರೂ ಸಾಧ್ಯವಾದಷ್ಟು ಬೇಗ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
"ನಾನು ಇಷ್ಟು ಬೇಗ ಗುಣಮುಖವಾಗಿದ್ದಕ್ಕೆ ಒಂದು ಮುಖ್ಯವಾದ ಕಾರಣ ನಾನು ಲಸಿಕೆಯ ಮೊದಲನೇ ಡೋಸ್ ಪಡೆದಿದ್ದದ್ದು ಎಂದು ವೈದ್ಯರು ಹೇಳಿದ್ದಾರೆ. ಲಸಿಕೆಯಿಂದಾಗಿ ವೈರಲ್ ಲೋಡ್ ಕಡಿಮೆಯಾಗಿ ರೋಗದ ಲಕ್ಷಣಗಳು ಕಾಣಿಸಲಿಲ್ಲ ಎಂದಿದ್ದಾರೆ. ನಾನು ಎಲ್ಲರನ್ನೂ ಕೇಳಿಕೊಳ್ಳುವುದೇನೆಂದರೆ, ಸಾಧ್ಯವಾದಷ್ಟು ಬೇಗ ಲಸಿಕೆ ತೆಗೆದುಕೊಳ್ಳಿ ಮತ್ತು ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಿ" ಎಂದು ರಾಮ್ಪಾಲ್ ಬರೆದಿದ್ದಾರೆ.
"ಸ್ಟೇ ಪಾಸಿಟೀವ್ ಅಂಡ್ ಡೋಂಟ್ ಬಿಕಮ್ ಪಾಸಿಟೀವ್" ಎಂದಿರುವ ರಾಮ್ಪಾಲ್, ಕರೊನಾದಿಂದ ನರಳುತ್ತಿರುವವರೊಂದಿಗೆ ನನ್ನ ಪ್ರಾರ್ಥನೆಗಳಿವೆ. ಈ ಸಮಯವೂ ಕಳೆಯಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)