

ಭದ್ರಾವತಿ: ನಗರದ ಚನ್ನಗಿರಿ ರಸ್ತೆಯ ಗಣೇಶ್ ರೈಸ್‌ಮಿಲ್‌ನಲ್ಲಿ ಗುರುವಾರ ರಾತ್ರಿ ಬಾಯ್ಲರ್ ಸ್ಫೋಟಗೊಂಡು ಕಟ್ಟಡ ಕುಸಿದಿದ್ದು, 7 ಕಾರ್ಮಿಕರು ಗಾಯಗೊಂಡಿದ್ದಾರೆ. ಇನ್ನೋರ್ವ ನಾಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಯಾಜ್, ಜಬಿ ಹುಸೇನ್, ಮಹಮದ್ ಬಿಲಾಲ್, ರಾಜಣ್ಣ, ಗೌತಮ್, ಮಹಮದ್ ಸನಾವುಲ್ಲಾ, ಸಲೀಂ ಗಾಯಗೊಂಡವರು. ಈ ಪೈಕಿ ನಾಲ್ವರು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದ ಮೂವರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಘು ಎಂಬಾತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಸ್ಫೋಟಗೊಂಡ ಸಂದರ್ಭ ಬಾಯ್ಲರ್ ಆಪರೇಟರ್ ರಘು ಸ್ಥಳದಲ್ಲಿದ್ದರು ಎಂಬ ಮಾಹಿತಿ ಆಧರಿಸಿ ಭತ್ತ ತುಂಬಿದ ಎರಡು ಲಾರಿಗಳ ನಡುವೆ ಆತ ಸಿಕ್ಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಜೆಸಿಬಿ ವಾಹನಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭತ್ತ ತುಂಬಿದ ಲಾರಿಯನ್ನು ರೈಸ್‌ಮಿಲ್ ಒಳಗೆ ನಿಲ್ಲಿಸಿ ಚಾಲಕ ಹಾಗೂ ಕ್ಲೀನರ್ ಟೀ ಕುಡಿಯಲು ಬೇರೆಡೆ ತೆರಳಿದ್ದ ಕಾರಣ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಸ್ಫೋಟದಿಂದ ವ್ಯಾಪಕ ಹಾನಿ: ಸ್ಫೋಟದ ರಭಸಕ್ಕೆ ರೈಸ್ ಮಿಲ್ ಮುಂಭಾಗ ಹಾಗೂ ಚನ್ನಗಿರಿ ರಸ್ತೆಯ 400 ಮೀಟರ್ ಅಂತರದಲ್ಲಿದ್ದ ಟೈರ್ ಅಂಗಡಿ ಗಾಜುಗಳು, ಟೈಲ್ಸ್ ಅಂಗಡಿಯಲ್ಲಿ ಟೈಲ್ಸ್‌ಗಳು ಪುಡಿಪುಡಿಯಾಗಿದೆ. ಟೈರ್ ಅಂಗಡಿ ಮಾಲೀಕ ಜಾಹಿದ್ ಹುಸೇನ್ ಎಂಬುವರ ಹಣೆಗೆ ಕಬ್ಬಿಣದ ರಾಡು ತಾಗಿ ಗಾಯಗೊಂಡಿದ್ದಾರೆ. ಅನ್ವರ್ ಕಾಲನಿಯಲ್ಲಿ ಅಜ್ಮಲ್ ಎಂಬುವರ ಮನೆ ಮೇಲೆ 50 ಕೆ.ಜಿ ತೂಕದ ತುಂಡು ಬಿದ್ದು ಛಾವಣಿ ಸಂಪೂರ್ಣ ಕುಸಿದಿದೆ. ಅಲ್ಲಿಯೇ ನಿಲ್ಲಿಸಿದ್ದ ಕಾರಿನ ಗಾಜು ಪುಡಿಯಾಗಿದೆ. ಅಲ್ಲದೆ, ಅಣ್ಣಾನಗರ, ಇಂದಿರಾನಗರ, ಆರ್‌ಎಂಸಿ ಕಾಂಪೌಂಡ್ ಭಾಗದ ಮನೆಗಳ ಮೇಲೆ ಬಾಯ್ಲರ್‌ನ ಬಿಡಿ ಭಾಗಗಳು ಹಾಗೂ ಮಿಲ್ಲಿನ ಇನ್ನಿತರೆ ವಸ್ತುಗಳು ಬಿದ್ದಿವೆ. ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದು ಸ್ಥಳದಲ್ಲಿದ್ದ ನಗರಸಭಾ ಸದಸ್ಯ ಬಶೀರ್ ತಿಳಿಸಿದ್ದಾರೆ.
ಆಪದ್ಬಾಂಧವ ಲಾರಿಗಳು: ಭತ್ತ ತುಂಬಿದ ಲಾರಿಗಳನ್ನು ರೈಸ್‌ಮಿಲ್ ಒಳಭಾಗದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ನಿಲ್ಲಿಸಿದ್ದರಿಂದ ದಾರಿಯಲ್ಲಿ ಸಂಚರಿಸುವವರಿಗೆ ಅಷ್ಟಾಗಿ ತೊಂದರೆಯಾಗಿಲ್ಲ. ಮಿಲ್ ಒಳಗಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೂಡ ಸಿಡಿದಿದ್ದು ಸುತ್ತಮುತ್ತಲಿನ ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಹೊಗೆ ಇಡೀ ನಗರವನ್ನೇ ವ್ಯಾಪಿಸಿದೆ. ರೈಸ್‌ಮಿಲ್ ಮಾಲೀಕ ಗಿರಿರಾಜ್ ಹಾಗೂ ದೀಪಕ್ ಅವರಿಂದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ತಹಸೀಲ್ದಾರ್ ಪರಸಪ್ಪ, ಎಸಿ ಸತ್ಯನಾರಾಯಣ ಅವರು ಘಟನೆ ಕುರಿತು ಮಾಹಿತಿ ಪಡೆದರು.