

ಟೆಸ್ಕೋ ಸೂಪರ್ ಮಾರ್ಕೆಟ್ಗೆ ಹೋಗಿ, ಸಿದ್ಧ ಊಟ (ರೆಡಿ ಮೀಲ್)ದ ಬಾಕ್ಸ್ ತೆಗೆದುಕೊಂಡು ತಂದು ಅರ್ಧ ಊಟ ಮಾಡಿದ ಮಹಿಳೆಗೆ ಭರ್ಜರಿ ಶಾಕ್ ಕಾದಿತ್ತು.
ಯುಎಸ್ನ ಡರ್ಹಾಮ್ನ ಕ್ಯಾಥ್ ಮ್ಯಾಕ್ಕಾಲ್ ಸ್ಮಿತ್ ಎಂಬ 57 ವರ್ಷದ ಮಹಿಳೆ ಈ ಊಟ ಮಾಡಿದ ಬಳಿಕ 12 ತಾಸು ನಿರಂತರವಾಗಿ ವಾಂತಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ರೆಡಿಮೇಡ್ ಊಟದ ಬಾಕ್ಸ್ಗೆ 3.75 ಪೌಂಡ್(356 ರೂ.) ಕೊಟ್ಟು ಖರೀದಿಸಿದ್ದೆ. ಆದರೆ ನನ್ನ ಆರೋಗ್ಯ ಹದಗೆಟ್ಟಿದ್ದಲ್ಲದೆ, ಮನಸಿಗೂ ತುಂಬ ಕಸಿವಿಸಿ ಆಯಿತು ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ನಾನು ಖರೀದಿ ಮಾಡಿದ್ದು, ಇಟಾಲಿಯನ್ ಚಿಕನ್ ಮೀಲ್ ಆಗಿತ್ತು. ತಿನ್ನುತ್ತಿದ್ದವಳಿಗೆ ಗ್ರೇವಿಯ ಅಡಿಯಲ್ಲಿ ಒಂದು ಪೀಸ್ನಂತಹ ವಸ್ತು ಕಂಡಿತು. ನಾನಂದುಕೊಂಡೆ ಅದು ಚಿಕನ್ ಪೀಸ್ ಆಗಿರಬಹುದು ಎಂದು. ಆದರೆ ಅದು ಸತ್ತ ಇಲಿಯ ದೇಹವಾಗಿತ್ತು. ಆ ಇಲಿಯ ದೇಹ ರಕ್ತಸಿಕ್ತವಾಗಿತ್ತು. ಅದನ್ನು ನೋಡುತ್ತಿದ್ದಂತೆ ದೊಡ್ಡದಾಗಿ ಚೀರಿಕೊಂಡೆ. ತುಂಬ ಗಲೀಜು ಎನ್ನಿಸಿತು. ಆಮೇಲೆ ವಾಂತಿಯಾಗಲು ಶುರುವಾಯಿತು. ಸುಮಾರು 12 ತಾಸು ವಾಂತಿಯಾಗಿದೆ ಎಂದು ಕ್ಯಾಥ್ ಮ್ಯಾಕ್ಕಾಲ್ ಸ್ಮಿತ್ ತಿಳಿಸಿದ್ದಾರೆ. ಇದನ್ನೂ ಓದಿ:‘ನಮ್ಮ ಮನೆಯ ದುಷ್ಟ ಬೆಕ್ಕಿನಿಂದ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ…’-ಬೇಸ್ತು ಬಿದ್ದ ಪತಿ ಮಹಾಶಯನ ಅಳಲು
ಅದರ ಫೋಟೋವನ್ನೂ ಕೂಡ ಮಹಿಳೆ ಶೇರ್ ಮಾಡಿಕೊಂಡಿದ್ದಾರೆ. ಆ ಇಲಿಯ ಹಲ್ಲುಗಳು, ಮೈಮೇಲಿನ ರಕ್ತ ಕೂಡ ಫೋಟೋದಲ್ಲಿ ಕಾಣುತ್ತವೆ. ಯಾರೋ ಇಲಿಗೆ ಹೊಡೆದಂತೆ ಭಾಸವಾಗುತ್ತದೆ.
ಟೆಸ್ಕೋದಲ್ಲಿ ಯಾರೂ ರೆಡಿ ಊಟವನ್ನು ಖರೀದಿ ಮಾಡಬೇಡಿ ಎಂದೂ ಮಹಿಳೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, ತಾವು ಖರೀದಿಸಿದ ಟೆಸ್ಕೋ ಸೂಪರ್ ಮಾರ್ಕೆಟ್ಗೆ ಹೋಗಿ ಕಂಪ್ಲೇಂಟ್ ಕೂಡ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಟೆಸ್ಕೋ, ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಶೀಘ್ರದಲ್ಲೇ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)