ಮರಕ್ಕೆ ಡಿಕ್ಕಿ ಹೊಡೆದು ರಕ್ತದ ಮಾದರಿಗಳನ್ನು ಹೊತ್ತೊಯ್ಯುತ್ತಿದ್ದ ಡ್ರೋನ್ ಪತನ!

Untitled design - 2023-08-08T181507.708
Published on

ಉತ್ತರಾಖಂಡ: ​ಏಮ್ಸ್​ ರಿಷಿಕೇಶ್​ನಿಂದ ಉತ್ತರಾಖಂಡದ ಕೋಟ್‌ದ್ವಾರ ಆಸ್ಪತ್ರೆಗೆ ರಕ್ತದ ಮಾದರಿಗಳನ್ನು ಹೊತ್ತೊಯ್ಯುತ್ತಿದ್ದ ಡ್ರೋನ್ ಸೋಮವಾರ ರಾಜ್ಯದ ಪೌರಿ ಜಿಲ್ಲೆಯ ಕಾಡಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ.

ಏಮ್ಸ್ ರಿಷಿಕೇಶ್ ನಿರ್ದೇಶಕ ಡಾ.ಮೀನು ಸಿಂಗ್ ಅವರ ನೇತೃತ್ವದಲ್ಲಿ, ದೂರದ ಪ್ರದೇಶಗಳಲ್ಲಿ ವಾಸವಿರುವವರಿಗೆ ರಕ್ತದ ಮಾದರಿಗಳು ಮತ್ತು ಅಗತ್ಯ ಔಷಧಿಗಳನ್ನು ತಲುಪಿಸುವ ಪ್ರಯೋಗದ ಭಾಗವಾಗಿ ಡ್ರೋನ್‌ನ ಪ್ರಯೋಗವನ್ನು ನಡೆಸಲಾಗಿತ್ತು. ಅದರಂತೆ ಇಂದಿನ ಪ್ರಯೋಗದಲ್ಲಿ ಬ್ಲಡ್​ ಸ್ಯಾಂಪಲ್​ಗಳನ್ನು ಹೊತ್ತ ಡ್ರೋನ್ ಏಮ್ಸ್ ರಿಷಿಕೇಶದಿಂದ ಹೊರಟು ಕೋಟ್‌ದ್ವಾರದ ಮೂಲ ಆಸ್ಪತ್ರೆಯತ್ತ ಹೊರಟಿತ್ತು. ಈ ವೇಳೆ ಮಾರ್ಗ ಮಧ್ಯೆ ಸಿದ್ಕುಲ್ ಪ್ರದೇಶದಲ್ಲಿ ಡ್ರೋನ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಪತನಗೊಂಡು ಸಂಪೂರ್ಣ ಜಖಂಗೊಂಡಿದೆ.

ಡ್ರೋನ್​ನ ಹಾರಿಬಿಟ್ಟ ವ್ಯಕ್ತಿ, ಕೋಟ್‌ದ್ವಾರದ ಆಸ್ಪತ್ರೆಯ ಮೇಲೆ ಅದರ ಆಗಮನಕ್ಕಾಗಿ ಕಾಯುತ್ತಿದ್ದರು. ಈ ಮಧ್ಯೆ ಡ್ರೋನ್ ಪತನಗೊಂಡ ಬಗ್ಗೆ ಸಂದೇಶದ ಮೂಲಕ ಮಾಹಿತಿ ತಿಳಿಯುತ್ತಿದ್ದಂತೆ, ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಡ್ರೋನ್​ ಬಿದ್ದ ಜಾಗದಲ್ಲಿ ಪರಿಶೀಲನೆ ನಡೆಸಿದಾಗ ಅದು ಸಂಪೂರ್ಣ ಹಾನಿಗೊಂಡಿರುವುದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಡ್ರೋನ್ ಪೈಲಟ್ ಸ್ನೇಹ್, ರಕ್ತದ ಮಾದರಿಗಳನ್ನು ಸಾಗಿಸುವ ಡ್ರೋನ್ ಪ್ರಾಯೋಗಿಕ ಹಾರಾಟದಲ್ಲಿತ್ತು. ಬಹುಶಃ ತಾಂತ್ರಿಕ ಅಡಚಣೆ ಅಥವಾ ಹವಾಮಾನ ಪರಿಸ್ಥಿತಿಗಳಿಂದ ಮರಕ್ಕೆ ಅಪ್ಪಳಿಸಿ ಪತನಗೊಂಡಿದೆ. ಡ್ರೋನ್ 400 ಅಡಿ ಎತ್ತರದವರೆಗೆ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net