ಗುಜರಾತ್​ನ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; 2 ಹಳ್ಳಿಗಳ ಜನರ ಸ್ಥಳಾಂತರ

Boiler blast
Published on

ಅಹಮದಾಬಾದ್​: ಆಂಧ್ರಪ್ರದೇಶ ವಿಶಾಖಪಟ್ಟಣದ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆಯಲ್ಲಿ ಸಂಭವಿಸಿದ ವಿಷಾನಿಲ ದುರಂತದ ನೆನಪು ಮಾಸುವ ಮುನ್ನವೇ, ಗುಜರಾತ್​ನ ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ.

ಸ್ಫೋಟದಿಂದಾಗಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಲ್ವತ್ತಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ದಹೇಜ್​ನ ಕೈಗಾರಿಕಾ ಪ್ರದೇಶದಲ್ಲಿರುವ ಯಶಸ್ವಿ ರಾಸಾಯನ ಪ್ರೈವೇಟ್​ ಲಿಮಿಟೆಡ್​ನ ಕಾರ್ಖಾನೆಯ ಬಾಯ್ಲರ್​ ಸ್ಫೋಟದಿಂದಾಗಿ ಈ ದುರಂತ ಸಂಭವಿಸಿದೆ.

ಕೃಷಿ ರಾಸಾಯನಿಕಗಳ ಕಾರ್ಖಾನೆ ಇದಾಗಿದ್ದು, ಮಧ್ಯಾಹ್ನದ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 40 ಜನರಿಗೆ ಸುಟ್ಟಗಾಯಗಳಾಗಿದ್ದು, ಭರೂಚ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಸಾಯನಿಕ ಸ್ಫೋಟದಿಂದಾಗಿ ಸುತ್ತಲಿನ ಪ್ರದೇಶದಲ್ಲಿ ಅಸಹನೀಯ ವಾಸನೆ ಹರಡಿದೆ. ಈ ರಾಸಾಯನಿಕಗಳು ವಿಷಕಾರಿಯಾಗಿದ್ದು, ಲಖಿ ಮತತ್ಉ ಲುವಾರಾ ಗ್ರಾಮಗಳ ಜನರನ್ನು ದೂರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಡಿ. ಮೋದಿಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net