ಕಾಂಗ್ರೆಸ್‌ ಪಕ್ಷವನ್ನು ದುರ್ಬಲಗೊಳಿಸಲು ಬಿಜೆಪಿ ವ್ಯವಸ್ಥಿತ ಪ್ರಯತ್ನ; ಸಿಎಂ ಸಿದ್ದರಾಮಯ್ಯ ವಾಗ್ದಾಳಿ

siddu
Published on

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಸ್ವಾಯತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೊದಲಾದವುಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಲು ಹೊರಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ತಮ್ಮ ಎಕ್ಸ್​ ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಸಿಎಂ ಕಾಂಗ್ರೆಸ್​ ವಿರುದ್ಧ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ. ಈ ರೀತಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಆ ಪಕ್ಷದ ಭ್ರಮೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮೇಲೆ ವರಮಾನ ತೆರಿಗೆ ಪಾವತಿ ಮಾಡದೆ ಇರುವ ಆರೋಪ ಹೊರಿಸಿ 1,823 ಕೋಟಿ ರೂ. ಪಾವತಿಸುವಂತೆ ಐಟಿ ಇಲಾಖೆ ನೋಟಿಸ್​ ನೀಡಿದೆ. 2017-18ರಲ್ಲಿ ಬಿಜೆಪಿ ಹೆಸರೇ ಇಲ್ಲದ 92 ದಾನಿಗಳಿಂದ 4.5 ಲಕ್ಷ ರೂ. ಮತ್ತು ವಿಳಾಸವೇ ಇಲ್ಲದ 1297 ದಾನಿಗಳಿಂದ 42 ಕೋಟಿ ರೂ. ದೇಣಿಗೆ ಪಡೆದಿರುವುದನ್ನು ನಮ್ಮ ಪಕ್ಷದ ನಾಯಕರು ಬಯಲಿಗೆಳೆದಿದ್ದಾರೆ. ನಮ್ಮ ಪಕ್ಷಕ್ಕೆ ಅನ್ವಯಿಸಿದ ಮಾನದಂಡವನ್ನೇ ಅನ್ವಯಿಸಿದರೆ ಬಿಜೆಪಿ ಕಳೆದ ಏಳು ವರ್ಷಗಳಲ್ಲಿ ನಡೆಸಿರುವ ತೆರಿಗೆ ಉಲ್ಲಂಘನೆಗಾಗಿ 4,263 ರೂ. ಕೋಟಿ ಪಾವತಿಸಬೇಕಾಗಿದೆ ಎಂದು ಗುಡುಗಿದರು.

ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು?: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅತಿಕ್ರಿಯಾಶೀಲವಾಗಿರುವ ಐಟಿ ಇಲಾಖೆ ಟಿಎಂಸಿ, ಸಿಪಿಐ ಸೇರಿದಂತೆ ಬೇರೆ ವಿರೋಧ ಪಕ್ಷಗಳ ಮೇಲೆಯೂ "ತೆರಿಗೆ ಭಯೋತ್ಪಾದನೆ"ಯ ಅಸ್ತ್ರ ಪ್ರಯೋಗ ಮಾಡಿದೆ. ವಿರೋಧ ಪಕ್ಷಗಳ ಮೇಲೆ ಮುಗಿ ಬಿದ್ದಿರುವ ಐಟಿ ಇಲಾಖೆ ಬಿಜೆಪಿಯ ತೆರಿಗೆ ಉಲ್ಲಂಘನೆ ಬಗ್ಗೆ ಮಾತ್ರ ಕುರುಡಾಗಿದೆ. ಐಟಿ ಇಲಾಖೆಯ ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು? ಎನ್ನುವುದನ್ನು ತಿಳಿಯದಷ್ಟು ದೇಶದ ಜನತೆ ದಡ್ಡರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿರ್ಲಾ-ಸಹಾರಾ ಡೈರಿಯಾಗಲಿ ಯಾಕೆ ಕಣ್ಣಿಗೆ ಬಿದ್ದಿಲ್ವ: ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಡೈರಿಗಳೆಂದು ಹೇಳಲಾದ ದಾಖಲೆಪತ್ರಗಳನ್ನು ಮುಂದಿಟ್ಟುಕೊಂಡು ತೆರಿಗೆ ಉಲ್ಲಂಘನೆಯ ಆರೋಪ ಮಾಡುತ್ತಿರುವ ಐಟಿ ಇಲಾಖೆಗೆ, ಕರ್ನಾಟಕದಲ್ಲಿಯೇ ಬಯಲಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಡೈರಿಗಳಾಗಲಿ, ಪ್ರಧಾನಿ ಮೋದಿ ಅವರೂ ಫಲಾನುಭವಿ ಎಂದು ಆರೋಪಿಸಲಾಗಿರುವ ಬಿರ್ಲಾ-ಸಹಾರಾ ಡೈರಿಯಾಗಲಿ ಯಾಕೆ ಕಣ್ಣಿಗೆ ಬಿದ್ದಿಲ್ವ ಎಂದು ಗುಡುಗಿದರು.

ವಂಚನೆಯ ಸುಳ್ಳು ಆರೋಪ: ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಬಾಂಡ್ ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಆಡಳಿತಾರೂಢ ಕೇಂದ್ರ ಬಿಜೆಪಿ ಸರ್ಕಾರ ಸುಲಿಗೆ ಮಾಡಿರುವುದು ಜಗಜ್ಜಾಹೀರಾಗಿದೆ. ಬಯಲಾಗಿರುವ ಈ ಹಗರಣದಿಂದ ಜನರ ಗಮನ ಬೇರೆ ಕಡೆ ಸೆಳೆಯುವ ಜೊತೆಯಲ್ಲಿ ವಿರೋಧ ಪಕ್ಷಗಳನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ವರಮಾನ ತೆರಿಗೆ ವಂಚನೆಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಟೀಕಿಸಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದ ಬ್ಯಾಂಕ್ ವಂಚಕರ 10.09 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕ್ ಸಾಲವನ್ನು‌ ಮನ್ನಾ ಮಾಡಿರುವ ಪ್ರಧಾನಿ ಮೋದಿ ಸರ್ಕಾರ ಅವರಿಂದ ಪಡೆದಿರುವ ಕಮಿಷನ್ ಹಣ ಎಷ್ಟು ಎನ್ನುವುದನ್ನು ದೇಶದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಗ್ರೆಸ್ ಪಕ್ಷದ ನಿಜವಾದ ಶಕ್ತಿ ಹಣದ ಬಲ ಅಲ್ಲ, ಜನ ಬಲ. ಬಿಜೆಪಿಯಲ್ಲಿ ಹಣ ಬಲ ಇದ್ದರೆ ನಮ್ಮಲ್ಲಿ ಜನಬಲ ಇದೆ. ತೆರಿಗೆ ವಂಚಕರು, ಬ್ಯಾಂಕ್ ಗಳನ್ನು ಮುಳುಗಿಸಿದವರು, ಗಣಿ ಲೂಟಿಕೋರರು, ಕಾಳಸಂತೆಕೋರರು, ಕಳ್ಳ-ಖದೀಮರೇ ಬಿಜೆಪಿಯ ಬಲ ಎಂದು ಟೀಕಿಸಿದರು.

ಶಿಕ್ಷೆಯಿಂದ ಪಾರಾಗಬೇಕಾದರೆ ಬಿಜೆಪಿ ಸೇರಿ: ಭ್ರಷ್ಟರ ಹಣವನ್ನು ನುಂಗಿ ಅವರಿಗೆ ಪ್ರಾಮಾಣಿಕತೆಯ ಸರ್ಟಿಫಿಕೇಟ್ ನೀಡುವ ವಾಷಿಂಗ್‌ ಮೆಶಿನ್‌ ಆಗಿದೆ. ಭ್ರಷ್ಟರು ತಾವು ಮಾಡಿದ ಮಹಾಪಾಪಗಳ ಮೇಲಿನ ತನಿಖೆಯಿಂದ ತಪ್ಪಿಸಿಕೊಳ್ಳಬೇಕಾದರೆ, ಶಿಕ್ಷೆಯಿಂದ ಪಾರಾಗಬೇಕಾದರೆ ಬಿಜೆಪಿ ಸೇರಿಕೊಂಡರೆ ಸಾಕು, ಪಾಪಗಳೆಲ್ಲವೂ ತನ್ನಿಂತಾನೆ ಶುದ್ಧವಾಗುತ್ತದೆ. ಅಲ್ಲಿದ್ದುಕೊಂಡು ಎಷ್ಟು ಬೇಕಾದರೂ ಭ್ರಷ್ಟಾಚಾರ ಮಾಡಬಹುದು, ಜನರ ಹಣ ಲೂಟಿ ಮಾಡಬಹುದು. ಅವರ ಮೇಲೆ ಯಾವ ಕೇಸೂ ದಾಖಲಾಗುವುದಿಲ್ಲ. ಯಾವ ತನಿಖಾ ಸಂಸ್ಥೆಯೂ ಹುಡುಕಿಕೊಂಡು ಬರುವುದಿಲ್ಲ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಮತ್ತು ಅಧಿಕಾರವನ್ನು ಉಳಿಸಿಕೊಂಡಿದ್ದೇ ಕಳ್ಳ-ಖದೀಮರ ಲೂಟಿಯ ಹಣದಿಂದ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕದಲ್ಲಿ ನಡೆಸುತ್ತಾ ಬಂದ ಆಪರೇಷನ್ ಕಮಲ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಎದೆ ತಟ್ಟಿಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳನ್ನು ಹಣಿಯಲು ಈ ರೀತಿಯ ಅಕ್ರಮ ಕೃತ್ಯಗಳಿಗೆ ಇಳಿದಿರುವುದನ್ನು ನೋಡಿದರೆ ಅವರಿಗೆ ಗೋಡೆ ಮೇಲಿನ ಬರಹ ಸ್ಪಷ್ಟವಾಗಿ ಕಾಣತೊಡಗಿದೆ ಎಂದರ್ಥ. ಅರಸನ ಮೈಮೇಲಿನ ಬಟ್ಟೆ ಒಂದೊಂದಾಗಿ ಕಳಚಿ ಬೀಳುತ್ತಿದೆ. ದೇಶದ ಜಾಗೃತ ಮತದಾರರ ಮುಂದೆ ಕೇಂದ್ರ ಬಿಜೆಪಿ ಮತ್ತು ಅದರ ತಥಾಕಥಿತ ನಾಯಕರೆಲ್ಲರೂ ಬತ್ತಲೆಯಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net