

ಕಲ್ಕತ್ತ: ಮಾಧಕ ಧ್ರವ್ಯ ಕೋಕೆನ್ ಸಾಗಿಸುತ್ತಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಬಿಜೆಪಿ ಯುವ ನಾಯಕಿಯನ್ನು ಅಲ್ಲಿನ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಪಮೇಲಾ ಗೋಸ್ವಾಮಿ ಬಂಧನಕ್ಕೆ ಒಳಗಾದ ಯುವತಿ. ಪಮೀಲಾ ತನ್ನ ಕಾರ್ನಲ್ಲಿ ಪ್ರಯಾಣಿಸುತ್ತಿದ್ದಾಗ ಅವಳ ಬಳಿ ಇದ್ದ ಪರ್ಸ್ ಮತ್ತು ಕಾರ್ ಸೀಟ್ ಕೆಳಗೆ 100 ಗ್ರಾಂ ನಷ್ಟು 5 ಲಕ್ಷ ರೂಪಾಯಿ ಮೌಲ್ಯದ ಕೋಕೆನ್ ವಶಪಡಿಸಿಕೊಳ್ಳಲಾಗಿದೆ.
ಕಲ್ಕತ್ತದ ಹೊಸ ಅಲಿಪುರ ಬಳಿ ಕೆಫೆ ಇಂದ ಹೊರ ಬರುತ್ತಿದ್ದಾಗ ಪಮೇಲಾ ಗೋಸ್ವಾಮಿ ಹಾಗೂ ಕಾರ್ನಲ್ಲಿದ್ದ ಬಿಜೆಪಿ ಕಾರ್ಯಕರ್ತ ಪ್ರಬೀರ್ ಕುಮಾರ್ ದೇಬ್ ಅವರನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದಾಗ ಮಾಧಕ ದ್ರವ್ಯ ಇರುವುದು ಗೊತ್ತಾಗಿದೆ. ದೇಬ್ ಅವರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ಸಮಿಕ್ ಬಟ್ಟಾಚಾರ್ಯ, 'ಪಶ್ಚಿಮ ಬಂಗಾಳ ಇಲ್ಲಿನ ರಾಜ್ಯ ಪೊಲೀಸರ ಕಪಿಮುಷ್ಠಿಯಲ್ಲಿದೆ. ನಮ್ಮ ಪಕ್ಷದ ನಾಯಕಿಯ ಕಾರ್ನಲ್ಲಿ ಯಾರೋ ಪಿತೂರಿ ಮಾಡಿ ಡ್ರಗ್ಸ್ ಇಟ್ಟಿರಬಹುದು. ಈ ಬಗ್ಗೆ ಕೂಲಂಕುಷ ತನಿಖೆಯಾಗಲಿ' ಎಂದು ಒತ್ತಾಯಿಸಿದ್ದಾರೆ.
ಇನ್ನು ತೃಣಮೂಲ ಕಾಂಗ್ರೆಸ್ನ ಚಂದ್ರಿಮಾ ಬಟ್ಟಾಚಾರ್ಯ ಅವರು, 'ಈ ತರಹದ ಘಟನೆ ಬಂಗಾಳದಲ್ಲಿ ನಡೆದಿರುವುದು ನಾಚಿಕೆ ತರುವಂತಹ ಕೆಲಸ. ಈ ರೀತಿ ಬಂಗಾಳವನ್ನು ಬದಲಿಸುವ ಕನಸನ್ನು ಬಿಜೆಪಿ ಹೊಂದಿದೆ' ಎಂದು ಹೇಳಿದ್ದಾರೆ. ಇತ್ತೀಚೆಗೆ ಮಕ್ಕಳ ಕಳ್ಳಸಾಗಾಣೆಯಲ್ಲಿ ಕೆಲ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಪಮೇಲಾ ಮಾಜಿ ಕಿರುತೆರೆ ನಟಿಯೂ ಹೌದು.