

ಹುಣಸೂರು: ಸಂಸತ್‌ಗೆ ಆಗುಂತಕರು ಅತಿಕ್ರಮ ಪ್ರವೇಶ ಮಾಡಿದ ಘಟನೆಯ ಹಿಂದೆ ಸಂಸದ ಪ್ರತಾಪ್ ಸಿಂಹ ಪಾತ್ರವಿದ್ದು ಅವರನ್ನು ಸಂಸತ್ ಸ್ಥಾನದಿಂದ ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ನಡೆಯನ್ನು ಖಂಡಿಸಿ ತಾಲೂಕು ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ನಗರದ ಸಂವಿಧಾನ ವೃತ್ತದಲ್ಲಿ ಶುಕ್ರವಾರ ಸೇರಿದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲೂಕು ಅಧ್ಯಕ್ಷ ನಾಗಣ್ಣಗೌಡ ಮಾತನಾಡಿ, ಸಂಸತ್ ಘಟನೆಗೂ, ಸಂಸದ ಪ್ರತಾಪ್ ಸಿಂಹ ಅವರಿಗೂ ಯಾವುದೇ ಸಂಬಂಧವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನ ಅಥವಾ ಸಂಸತ್ ಕಲಾಪ ವೀಕ್ಷಣೆಗೆ ಆಸಕ್ತಿ ಹೊಂದಿದವರು ಚುನಾಯಿತ ಪ್ರತಿನಿಧಿಗಳ ಪಾಸ್ ಪಡೆದು ತೆರಳುವುದು ಸಾಮಾನ್ಯ. ಅದೇ ರೀತಿಯಲ್ಲಿ ಸಂಸದ ಪ್ರತಾಪ್‌ಸಿಂಹ ಕೂಡ ಪಾಸ್ ನೀಡಿದ್ದಾರೆ. ಆದರೆ, ಆರೋಪಿ ಪಾಸ್ ಪಡೆದು ಈ ಕೃತ್ಯಕ್ಕೆ ಬಳಸಿಕೊಂಡಿರುವುದು ದುರದೃಷ್ಟಕರ. ಆದರೆ ಈ ಘಟನೆಯನ್ನು ಸಂಸದರ ತಲೆಗೆ ಕಟ್ಟುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.
ಸಂಸದರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು 7 ದಶಕದಿಂದ ಬೇರಾವುದೇ ಪಕ್ಷದ ಸಂಸದರು ಮಾಡಿಲ್ಲ. ಇದನ್ನು ಸಹಿಸದ ಕಾಂಗ್ರೆಸ್ ಸಂಸತ್ ಘಟನೆಯನ್ನು ಪ್ರತಾಪ್ ಸಿಂಹ ಅವರ ಹೆಸರಿಗೆ ತಗಲು ಹಾಕುವ ಹುನ್ನಾರ ನಡೆಸಿದ್ದಾರೆ. ಇಷ್ಟಕ್ಕೂ ಮೈಸೂರಿನ ಆರೋಪಿ ಮನೋರಂಜನ್ ಬಿಜೆಪಿ ಕಾರ್ಯಕರ್ತನಲ್ಲ. ಆತ ಎಸ್‌ಎಫ್‌ಐ ನಂಟು ಹೊಂದಿರುವುದು ಬಯಲಾಗಿದೆ. ಸಂಸದರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎನ್ನುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರನ್ನು ಮೊದಲು ತನಿಖೆಗೆ ಒಳಪಡಿಸಬೇಕಾಗಿದೆ ಎಂದರು.
ಮುಖಂಡ ನಾಗರಾಜ ಮಲ್ಲಾಡಿ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವಿಷಯವಿಲ್ಲ. ಹಾಗಾಗಿ ಸಂಸದ ಪ್ರತಾಪ್ ಸಿಂಹ ಪಾಸ್ ವಿಷಯ ಹಿಡಿದು ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ ಎಂದು ಟೀಕಿಸಿದರು.
ಹನಗೋಡು ಮಂಜುನಾಥ್, ತಂಬಾಕು ಮಂಡಳಿ ನಿರ್ದೇಶಕ ದಿನೇಶ್, ಹೂಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ್ ಕುಮಾರ್, ಮಂಜುಳಾ, ಸ್ವಾಮಿನಾಯಕ, ಸತೀಶ್, ಶ್ರೀನಿವಾಸ್, ವೆಂಕಟೇಶ್, ಬಿ.ಎನ್.ನಾಗರಾಜಪ್ಪ, ಗಣಪತಿ, ಕಾರ್ಯಕರ್ತರು ಭಾಗವಹಿಸಿದ್ದರು.