ಅನರ್ಹ ಸಂಸದ ರಾಹುಲ್​ ಗಾಂಧಿ ಪರ ಕಾಂಗ್ರೆಸ್​ ಮೌನ ಪ್ರತಿಭಟನೆ ನಡೆಸಿದ್ದು ಒಂದು ಹಾಸ್ಯಾಸ್ಪದ ಸಂಗತಿ: ಬಿಜೆಪಿ ವ್ಯಂಗ್ಯ

Untitled design (26)
Published on

ಬೆಂಗಳೂರು: ರಾಹುಲ್​​ ಗಾಂಧಿ ಪರ ಕಾಂಗ್ರೆಸ್​ ನಾಯಕರು ನಡೆಸಿದ ಪ್ರತಿಭಟನೆ ಕುರಿತು ರಾಜ್ಯ ಬಿಜೆಪಿ ಟ್ವೀಟ್​​ ಮೂಲಕ ವ್ಯಂಗ್ಯವಾಡಿದೆ.

ಸರಣಿ ಟ್ವೀಟ್​​ ಮಾಡಿರುವ ಬಿಜೆಪಿ, "ಅನರ್ಹ ಸಂಸದ ರಾಹುಲ್ ಗಾಂಧಿಯ ಪರ ಎಟಿಎಂ ಸರ್ಕಾರದವರು ಮೌನ ಪ್ರತಿಭಟನೆ ನಡೆಸಿದ್ದು ಒಂದು ಹಾಸ್ಯಾಸ್ಪದ ಸಂಗತಿ. ಜಾತಿನಿಂದನೆ ಅಪರಾಧವೇ, ಅದರಲ್ಲಿಯೂ ರಾಜಕೀಯ ದ್ವೇಷದಿಂದ ಭಾರತದ ಪ್ರಧಾನಿಯವರ ಜಾತಿಯನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿದ್ದು, ವಿದೇಶಿ ಕೈಗೊಂಬೆ ರಾಹುಲ್ ಗಾಂಧಿಯ ಅಪ್ರಬುದ್ಧತೆಗೆ ಮತ್ತು ಸಂವಿಧಾನ ವಿರೋಧಿ ಮಾನಸಿಕತೆಗೆ ಸಾಕ್ಷಿಯಾಗಿದೆ" ಎಂದು ಟ್ವೀಟ್ ಮಾಡಿದೆ.

"ಇಂತಹ ಹೀನ ಮನಸ್ಥಿತಿಯುಳ್ಳ ರಾಹುಲ್ ಪರ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್​​ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಹಿಂದುಳಿದ ವರ್ಗಗಳನ್ನು ಹೀಯಾಳಿಸಿದ್ದಾರೆ ಎಂಬ ಕಾರಣಕ್ಕೆ ಘನ ನ್ಯಾಯಾಲಯವು ರಾಹುಲ್​​ ಗಾಂಧಿಗೆ ಶಿಕ್ಷೆ ನೀಡಿದ್ದು, ಕಾನೂನಿನ ಪ್ರಕಾರ ಸಹಜವಾಗಿಯೇ ಅನರ್ಹಗೊಂಡಿದ್ದಾರೆ. ಆದ್ರೆ, ಕೋರ್ಟ್​​​ನ​​​ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ 'ಕೈ' ಪಕ್ಷದವರು, ನ್ಯಾಯಾಂಗ ವ್ಯವಸ್ಥೆಯ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ" ಎಂದು ಟ್ವೀಟ್ ಮಾಡಿದೆ.

"ಸಂವಿಧಾನದ ರಕ್ಷಕರು ಎಂದು ಬಡಾಯಿಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಮತ್ತು ಕೋ ಈ ನೆಲದ ಕಾನೂನು ಮತ್ತು ಸಂವಿಧಾನಕ್ಕೆ ಗೌರವ ನೀಡುತ್ತಿರುವ ಪರಿ ಇದು" ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net