ಲೋಕ ಗೆಲ್ಲಲು ಬಿಜೆಪಿ ಕಾರ್ಯತಂತ್ರ: ಸೆಪ್ಟೆಂಬರ್​ನಲ್ಲಿ ಸಂಭಾವ್ಯರ, ಆಕಾಂಕ್ಷಿಗಳ ಶೋಧ; ಮಾಹಿತಿ ಲಭ್ಯವಾದ ನಂತರ 2 ಹಂತದ ಸಮೀಕ್ಷೆ

BJP symbol
Published on

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ‘ಮಿಷನ್ 25’ ಗುರಿಯಡಿ ಅಖಾಡ ಸಜ್ಜು ಪೂರ್ವ ಕಾರ್ಯತಂತ್ರಗಳನ್ನು ಬಿಜೆಪಿ ಹೆಣೆಯಲಾರಂಭಿಸಿದ್ದು, ಸೆಪ್ಟೆಂಬರ್​ನಲ್ಲಿ ಕಾರ್ಯಗತಗೊಳಿಸಲಿದೆ.

ಕ್ಷೇತ್ರಮಟ್ಟದಲ್ಲಿ ಕಾರ್ಯಕರ್ತರನ್ನು ಅಣಿಗೊಳಿಸಲು ರಾಜ್ಯ ನಾಯಕರ ಸಂಘಟನಾ ಪ್ರವಾಸ, ಮೋದಿ ಬ್ರಾ್ಯಂಡ್​ಗೆ ಹೊಳಪು ತುಂಬಲು ಪ್ರತಿ ಮನೆಗೆ ಸಂಪರ್ಕ, ಸಾಧನೆಗಳ ವ್ಯಾಪಕ ಪ್ರಚಾರದ ಮುಖೇನ ಪಕ್ಷದ ಪರ ವಾತಾವರಣ ನಿರ್ವಿುಸಲಿದೆ.

ನಂತರ ಕೇಂದ್ರ ಸಚಿವರು ಅವಲೋಕನ ಕಾರ್ಯಕ್ಕೆ ತೊಡಗಲಿದ್ದಾರೆ. ಈ ನಡುವೆ ಪ್ರಾಥಮಿಕವಾಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿ, ಸಮರ್ಥ ಆಕಾಂಕ್ಷಿಗಳ ಶೋಧ ಕಾರ್ಯ ನಡೆಯಲಿದೆ. ಹಾಲಿ ಸಂಸದರ ಪೈಕಿ ಕೆಲವರಿಗೆ ಕೊಕ್, ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ಇತ್ಯಾದಿ ಚರ್ಚೆಗಳು ಅನಗತ್ಯವೆಂಬ ಪರೋಕ್ಷ ಸೂಚನೆಯನ್ನೂ ನೀಡಲಾಗಿದೆ.

ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಅಂತಿಮಗೊಳಿಸಲಿದೆ. ಸಂಭಾವ್ಯರು ಮತ್ತು ಆಕಾಂಕ್ಷಿಗಳ ಕುರಿತು ನಿರ್ದಿಷ್ಟ, ನಿಖರ ಮಾಹಿತಿಯನ್ನು ಹೆಸರಿನ ಪಟ್ಟಿಯೊಂದಿಗೆ ರಾಜ್ಯ ಸಮಿತಿ ಸಲ್ಲಿಸಲಿದೆ. ಸಮಗ್ರ ವರದಿ ವರಿಷ್ಠರ ಕೈಗೆ ತಲುಪುತ್ತಿದ್ದಂತೆಯೇ ವಾಸ್ತವಿಕ ಪರಿಸ್ಥಿತಿ ಪರಾಮರ್ಶೆಗೆ ಎರಡು ಹಂತದ ಸಮೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಮೌಲ್ಯಮಾಪನದ ಯೋಚನೆಯಿಲ್ಲ: ಕೇಂದ್ರ ಸಚಿವ ಸಂಪುಟದ ಸದಸ್ಯರು ಸೇರಿ ರಾಜ್ಯದ ಪ್ರತಿಯೊಬ್ಬ ಸಂಸದರ ಕಾರ್ಯಸಾಧನೆ, ಕ್ಷಮತೆಯ ಸ್ಥೂಲ ಮಾಹಿತಿ ವರಿಷ್ಠರ ಬಳಿಯಿದೆ. ಈ ಕಾರಣಕ್ಕೆ ಪ್ರತ್ಯೇಕವಾಗಿ ಮೌಲ್ಯಮಾಪನದ ಬಗ್ಗೆ ಯೋಚಿಸಿಲ್ಲ.

ಹೊಸಮುಖಗಳಿಗೆ ಮಣೆ ಹಾಕುವ ವಿಷಯದಲ್ಲಿ ಈ ಬಾರಿ ಗೊಂದಲ, ದ್ವಂದ್ವಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎನ್ನುವುದು ರಾಜ್ಯ ಕೆಲ ನಾಯಕರ ಇಂಗಿತವಾಗಿದೆ.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವಿಷಯಗಳು ಭಿನ್ನ. ಪಕ್ಷ ಹಾಗೂ ನಾಯಕತ್ವದಲ್ಲೂ ಬಿಜೆಪಿ ಗಟ್ಟಿಯಾಗಿರುವ ಕಾರಣ ಹೆಚ್ಚಿನ ಸವಾಲು ಎದುರಾಗದು. ಮೋದಿ ಬ್ರ್ಯಾಂಡ್​ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದ್ದು, ಹೆಚ್ಚು ಪರಿಣಾಮಕಾರಿಯಾಗಿ ಬಿಂಬಿಸುವುದು ರಾಜ್ಯ ನಾಯಕರ ಹೊಣೆಯಾಗಿದೆ.

ಅಪೇಕ್ಷೆ ಫಲಿಸಲಿದೆ: ಅಧಿಕೃತ ಅಭ್ಯರ್ಥಿಗಳ ಪಟ್ಟಿ ವಿಳಂಬದಿಂದ ಗೊಂದಲ, ಅನಿಶ್ಚತತೆ ಕಾಡಲಿದೆ. ವ್ಯಾಪಕ ಪ್ರಚಾರಕ್ಕೂ ಕಾಲಾವಕಾಶದ ಕೊರತೆಯಾಗಲಿದೆ ಎಂಬ ಅಂಶವು ವರಿಷ್ಠರ ಗಮನದಲ್ಲಿದೆ. ರಾಜ್ಯ ನಾಯಕರು, ಅನೇಕ ಸಂಸದರ ಅಪೇಕ್ಷೆಯಂತೆ ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿಗಳ ಹೆಸರು ಬಿಡುಗಡೆಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಟಿಕೆಟ್ ನೀಡುವ ಬಗ್ಗೆ ಚಿಂತೆ ಮಾಡದೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕೆಂದು ಹಾಲಿ ಸಂಸದರಿಗೆ ವರಿಷ್ಠರು ಸಲಹೆ ನೀಡಿದ್ದಾರೆ. ಕಳೆದ ಸಲದಂತೆ ಈ ಬಾರಿಯೂ ಪ್ರತಿಪಕ್ಷವಾಗಿ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸಲಿದ್ದು, ಕಾಂಗ್ರೆಸ್​ನ ಹುಮ್ಮಸ್ಸು ಕಟ್ಟಿಹಾಕಲು ಬೇಕಾದ ಅಸ್ತ್ರಗಳನ್ನು ಪ್ರಯೋಗಿಸುವ ಅಗತ್ಯವಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

ಹೋರಾಟ ಸ್ಥಳಗಳಿಂದ ಮಣ್ಣು ಸಂಗ್ರಹ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರೋಪ ನಿಮಿತ್ತ ‘ನನ್ನ ಮಣ್ಣು ನನ್ನ ದೇಶ (ಮೇರಿ ಮಾಠಿ ಮೇರಾ ದೇಶ್) ಅಭಿಯಾನವು ರಾಜ್ಯದಲ್ಲಿ ಆ.15ರಿಂದ ಶುರುವಾಗಲಿದೆ.

ಈ ಅಭಿಯಾನದ ಮೂಲಕ ಕಿತ್ತೂರು, ಮೈಸೂರು, ಬೆಂಗಳೂರು ಸೇರಿ 7,500 ಸ್ವಾತಂತ್ರ್ಯ ಹೋರಾಟದ ಸ್ಥಳಗಳಿಂದ ಮಣ್ಣು ಸಂಗ್ರಹಿಸಿ ದೆಹಲಿಗೆ ಕಳುಹಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ದೆಹಲಿಯ ಕರ್ತವ್ಯ ಪಥದ ವಾಟಿಕಾ ಪಾರ್ಕ್​ನಲ್ಲಿ ನಿರ್ವಿುಸಲು ಉದ್ದೇಶಿತ ಉದ್ಯಾನವನಕ್ಕೆ ಈ ಮಣ್ಣು ಬಳಕೆಯಾಗಲಿದೆ. ದೇಶದ ಆರು ಲಕ್ಷ ಪಂಚಾಯಿತಿಗಳಿಂದ ಮಣ್ಣು ಸಂಗ್ರಹದ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈಗಾಗಲೆ ತಿಳಿಸಿದ್ದು, ದೆಹಲಿಯಲ್ಲಿ ಅ.30ರಂದು ಅಮೃತ ಮಹೋತ್ಸವ ಸಮಾರೋಪ ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ.

ಪ್ರದರ್ಶನ, ಪಂಜಿನ ಮೆರವಣಿಗೆ: ಆ.14ರ ರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಖುಷಿ ಜತೆಗೆ ಅಷ್ಟೇ ಪ್ರಮಾಣದಲ್ಲಿ ದುಃಖವೂ ಆಗಿತ್ತು. ಭಾರತ ವಿಭಜನೆ ಮೂಲಕ ಎರಡು ತುಂಡಾದ ದಿನವನ್ನು ಭಾರತ ವಿಭಜನೆಯ ದುರಂತ ಕಥೆ ತಿಳಿಸುವ ಉದ್ದೇಶ ಹೊಂದಲಾಗಿದೆ.

ವಿಭಜನೆಯ ದುರಂತ ಕಥೆಗಳನ್ನು ಸಾರುವ ಪ್ರದರ್ಶಿನಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಿದ್ದು, ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿಯಲ್ಲಿ ಈ ಪ್ರದರ್ಶಿನಿ ಏರ್ಪಡಿಸಲಾಗಿದೆ. ದುರಂತ ಕಥನ ಕೇಳುವ ವ್ಯವಸ್ಥೆ, ಭಾಷಣವೂ ಇರಲಿದೆ.

ಸೋಮವಾರ ಬೆಳಗ್ಗೆ 11ಕ್ಕೆ ಈ ಪ್ರದರ್ಶಿನಿಯನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸಲಿದ್ದು, ಮಾಜಿ ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಂಸದ ಪಿ.ಸಿ.ಮೋಹನ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಜರಿರಲಿದ್ದಾರೆ.

ಗೆದ್ದಲಹಳ್ಳಿ ಆಂಜನೇಯಸ್ವಾಮಿ ಹೆಬ್ಬಾಳದಿಂದ ಸಂಜೆ 6ಕ್ಕೆ ಪಂಜಿನ ಮೆರವಣಿಗೆ ಶುರುವಾಗಲಿದ್ದು, ಪಕ್ಷದ ರಾಜ್ಯಾಧ್ಯಕ್ಷ, ಸಂಸದ ಡಿ.ವಿ.ಸದಾನಂದಗೌಡ ಭಾಗವಹಿಸಲಿದ್ದಾರೆ.

ಆ.15ರ ಸ್ವಾತಂತ್ರ್ಯ ಮಹೋತ್ಸವವನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಿದ್ದೇವೆ. ಎಲ್ಲ ಗ್ರಾ.ಪಂ., ತಾಲೂಕು, ಜಿಲ್ಲಾ ಕಾರ್ಯಾಲಯಗಳಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಧ್ವಜಾರೋಹಣ ಮಾಡಿ, ಹುತಾತ್ಮ ವೀರಯೋಧರು, ಸ್ವಾತಂತ್ರ್ಯ ಯೋಧರ ತ್ಯಾಗ ಮತ್ತು ಬಲಿದಾನ ಸ್ಮರಿಸಲಿದ್ದಾರೆ ಎಂದು ಎನ್.ರವಿಕುಮಾರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net