ಓದುತ್ತಿದ್ದ ಪುತ್ರನನ್ನು ನೋಡಲು ಬಂದ ತಾಯಿ, ಅದೇ ಕೊನೇ ಭೇಟಿ ಆಯ್ತು: ಬಚಾವಾದ ಮಗ, ಸಾವಿಗೀಡಾದ ಅಮ್ಮ!

Siddaganga 1
Published on

ತುಮಕೂರು: ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದ ಮಗನನ್ನು ನೋಡಲು ತಾಯಿ ಬಂದಿದ್ದು, ಅದೇ ಕೊನೇ ಭೇಟಿ ಆದಂತಹ ದುರಂತವೊಂದು ನಡೆದಿದೆ. ಆಪತ್ತಿಗೆ ಸಿಲುಕಿದ್ದ ಮಗನನ್ನು ರಕ್ಷಿಸಲು ತಾಯಿಯೇ ಧುಮುಕಿದ್ದು, ಮಗ ಬಚಾವಾದರೂ ತಾಯಿ ಸಾವಿಗೀಡಾಗುವಂತಾಯ್ತು.

ಸಿದ್ಧಗಂಗಾ ಮಠದಲ್ಲಿ ನೆಲೆಸಿ ಓದುತ್ತಿದ್ದ ರಂಜಿತ್ ಎಂಬಾತನನ್ನು ಇಂದು ಭಾನುವಾರವಾದ್ದರಿಂದ ನೋಡಿಕೊಂಡು ಹೋಗಲು ತಾಯಿ ಲಕ್ಷ್ಮೀ ಬಂದಿದ್ದರು. ಆತನ ಸ್ನೇಹಿತರೊಂದಿಗೆ ಸಿದ್ಧಗಂಗಾ ಮಠದಲ್ಲಿನ ಗೋ ಕಟ್ಟೆ ಬಳಿಗೆ ತೆರಳಿದ್ದಾರೆ. ರಂಜಿತ್, ಸಹೋದರಿ ಮತ್ತು ಸ್ನೇಹಿತರೆಲ್ಲ ಜೊತೆಯಾಗಿ ಅಲ್ಲಿ ಆಟವಾಡಿ, ಸೆಲ್ಫಿ ತೆಗೆದುಕೊಂಡು ಸ್ಟೇಟಸ್ ಹಾಕಿಕೊಂಡಿದ್ದರು. ಆದರೆ ಈ ಎಲ್ಲ ಖುಷಿಯ ಬೆನ್ನಿಗೇ ನಾಲ್ವರು ಸಾವಿಗೀಡಾಗಿದ್ದು, ತೀವ್ರ ಆಘಾತ ಉಂಟಾಗಿದೆ.

ಮಧ್ಯಾಹ್ನ ಊಟದ ಬಳಿಕ ರಂಜಿತ್ ಮತ್ತು ಸ್ನೇಹಿತರಾದ ಶಂಕರ್, ಹರ್ಷಿತ್, ರಂಜಿತ್ ತಾಯಿ ಲಕ್ಷ್ಮೀ ಹಾಗೂ ಸಹೋದರಿ ಎಲ್ಲರೂ ಸಿದ್ಧಗಂಗಾ ಮಠದ ಗೋ ಕಟ್ಟೆ ಬಳಿ ಜೊತೆಗೇ ಊಟ ಮಾಡಿದ್ದರು. ಊಟದ ಬಳಿಕ ಕೈ ತೊಳೆಯಲು ರಂಜಿತ್ ಗೋ ಕಟ್ಟೆಗೆ ತೆರಳಿದ್ದ. ಆಗ ಆತ ಅಲ್ಲಿ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದ. ರಂಜಿತ್​ನನ್ನು ರಕ್ಷಿಸಲು ಹರ್ಷಿತ್, ಶಂಕರ್ ನೀರಿಗೆ ಹಾರಿದ್ದರು. ಆ ಮೂವರಿಗೆ ಅಪಾಯ ಆಗುವ ಸಾಧ್ಯತೆ ಇದ್ದಿದ್ದರಿಂದ ರಂಜಿತ್ ತಾಯಿ ಲಕ್ಷ್ಮೀ ಹಾಗೂ ಇನ್ನೊಬ್ಬ ಪಾಲಕ ಮಹದೇವಪ್ಪ ಕೂಡ ನೀರಿಗೆ ಧುಮುಕಿದ್ದರು.

ಆದರೆ ಮೊದಲಿಗೆ ಅಪಾಯಕ್ಕೆ ಸಿಲುಕಿದ್ದ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ಮೂವರು ನೀರಿನಲ್ಲಿ ಮುಳುಗಿ ಸಾವಿಗೀಡಾದರು. ಸದ್ಯ ಲಕ್ಷ್ಮೀ ಹಾಗೂ ಹರ್ಷಿತ್ ಮೃತದೇಹವನ್ನ ಹೊರ ತೆಗೆದಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಎಸ್​ಪಿ ರಾಹುಲ್​ ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net