

BJP: ದೇಶದಲ್ಲಿ ಮತಗಳ್ಳತನ ಕುರಿತಂತೆ ಈಗಾಗಲೇ ಅಟಂ ಬಾಂಬ್ ಸಿಡಿಸಲಾಗಿದೆ. ಶೀಘ್ರದಲ್ಲೇ ಹೈಡ್ರೋಜನ್ ಬಾಂಬ್ ಬರುತ್ತೆ, ಅದು ಬಂದ್ರೆ ಮೋದಿಗೆ ಮುಖ ತೋರಿಸಲಾಗಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಇದೊಂದು ಬೇಜವಾಬ್ದಾರಿ ಹೇಳಿಕೆ ಎಂದು ಕಿಡಿಕಾರಿದೆ.
ಇದು ತನ್ನನ್ನು ತಾನು ಅವಮಾನಿಸಿಕೊಂಡ ಮತ್ತು ದೇಶದ ಮತದಾರರನ್ನು ಅವಮಾನಿಸುವಂತಿದೆ. ರಾಹುಲ್ ಗಾಂಧಿಯವರ ಯಾತ್ರೆ ಕುರಿತು ಅಪಹಾಸ್ಯ ಮಾಡಿರುವ ಬಿಜೆಪಿ ಯಾತ್ರೆಯಲ್ಲಿ ಭಾರಿ ಜನಸಂಖ್ಯೆ ಭಾಗವಹಿಸಿತ್ತು ಎಂದು ತೋರಿಸಲು ಜನರನ್ನು ಉತ್ತರ ಪ್ರದೇಶ ಡಿಯೋರಿಯಾದಿಂದ ಕರೆತರಲಾಗಿತ್ತು ಎಂದು ಆರೋಪಿಸಿದೆ.
ರಾಹುಲ್ ಗಾಂಧಿ ಹೇಳಿಕೆ ಕುರಿತು ಮಾತನಾಡಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿಯವರ ಮಾತು ಸಂಸತ್ತಿನ ಒಳಗೆ ಅಥವಾ ಹೊರಗೆ ಕೇಳಿದಾಗಲೆಲ್ಲಾ, ಅವರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ನಾನು ಸಮಯ ತೆಗೆದುಕೊಳ್ಳುತ್ತೇನೆ. ಪರಮಾಣು ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ಚುನಾವಣೆಗಳಿಗೆ ಹೇಗೆ ಸಂಬಂಧಿಸಿವೆ? ರಾಹುಲ್ ಗಾಂಧಿ ಬೇಜವಾಬ್ದಾರರು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದೇನು?
ಬಿಹಾರದ ಪಾಟ್ನಾದಲ್ಲಿ ಮತದಾರ ಅಧಿಕಾರ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್, ಬಿಹಾರ ಒಂದು ಕ್ರಾಂತಿಕಾರಿ ರಾಜ್ಯವಾಗಿದ್ದು, ಅದು ದೇಶಕ್ಕೆ ಒಂದು ಸಂದೇಶವನ್ನು ನೀಡಿದೆ. ಬಿಜೆಪಿ ಸಂವಿಧಾನವನ್ನು ಹತ್ಯೆ ಮಾಡಲು ನಾವು ಬಿಡುವುದಿಲ್ಲ. ಅದಕ್ಕಾಗಿಯೇ ಯಾತ್ರೆಯನ್ನು ಕೈಗೊಂಡಿದ್ದೇವೆ. ನಮಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು 'ಚೋರ್ ಗಡ್ಡಿ ಛೋರ್' ಎಂಬ ಘೋಷಣೆಯನ್ನು ಕೂಗಿದರು" ಎಂದು ತಿಳಿಸಿದರು.
ನಾನು ಬಿಜೆಪಿ ಜನರಿಗೆ ಹೇಳಲು ಬಯಸುತ್ತೇನೆ. ಅಣು ಬಾಂಬ್‌ಗಿಂತ ದೊಡ್ಡದಾದ ಯಾವುದನ್ನಾದರೂ ನೀವು ಕೇಳಿದ್ದೀರಾ, ಅದು ಹೈಡ್ರೋಜನ್ ಬಾಂಬ್. ಬಿಜೆಪಿ ಜನರೇ ಸಿದ್ಧರಾಗಿರಿ, ಹೈಡ್ರೋಜನ್ ಬಾಂಬ್ ಬರುತ್ತಿದೆ. ಜನರು ಶೀಘ್ರದಲ್ಲೇ ಮತಗಳ್ಳತನದ ವಾಸ್ತವತೆಯನ್ನು ಅರಿತುಕೊಳ್ಳಲಿದ್ದಾರೆ. ಹೈಡ್ರೋಜನ್ ಬಾಂಬ್ ಬಂದ ಬಳಿಕ ನರೇಂದ್ರ ಮೋದಿ ಜಿ ದೇಶಕ್ಕೆ ತಮ್ಮ ಮುಖ ತೋರಿಸಲು ಸಾಧ್ಯವಾಗುವುದಿಲ್ಲ, ಇದನ್ನು ನಾನು ನಿಮಗೆ ಖಾತರಿ ನೀಡುತ್ತಿದ್ದೇನೆ ಎಂದು ಮತ್ತೊಂದು ದಾಖಲೆ ಬಹಿರಂಗ ಪಡಿಸುವ ಸೂಚನೆಯನ್ನು ನೀಡಿದರು. (ಎಜೆನ್ಸೀಸ್)