

Rahul Gandhi: ದೇಶದಲ್ಲಿ ಮತಗಳ್ಳತನದ ಬಗ್ಗೆ ಆರೋಪ ಮಾಡಿದ್ದ ರಾಹುಲ್ ಗಾಂಧಿ ಈ ಕುರಿತು ಅಟಂ ಬಾಂಬ್ ನಂತಹ ದಾಖಲೆಗಳಿವೆ ಎಂದು ಹೇಳಿ ಮಹಾದೇವಪುರ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನವನ್ನು ದಾಖಲೆ ಸಮೇತ ಪ್ರಸ್ತುತ ಪಡಿಸಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದರು. ಈಗ ಅಂತಹದೇ ಮತ್ತೊಂದು ಹೈಡ್ರೋಜನ್ ಬಾಂಬ್ ಇದೆ, ಅದನ್ನು ಶೀಘ್ರದಲ್ಲೇ ಬಹಿರಂಗ ಪಡಿಸುತ್ತಯೇನೆ ಆಗ ದೇಶದಲ್ಲೇ ಮೋದಿಗೆ ಮುಖ ತೋರಿಸಲಾಗಲ್ಲ ಎಂದು ಸೋಮವಾರ(ಸೆ. 01) ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಮತದಾರ ಅಧಿಕಾರ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಹಾರ ಒಂದು ಕ್ರಾಂತಿಕಾರಿ ರಾಜ್ಯವಾಗಿದ್ದು, ಅದು ದೇಶಕ್ಕೆ ಒಂದು ಸಂದೇಶವನ್ನು ನೀಡಿದೆ. ನಾವು (ಬಿಜೆಪಿ) ಸಂವಿಧಾನವನ್ನು ಹತ್ಯೆ ಮಾಡಲು ಬಿಡುವುದಿಲ್ಲ. ಅದಕ್ಕಾಗಿಯೇ ಯಾತ್ರೆಯನ್ನು ಕೈಗೊಂಡಿದ್ದೇವೆ. ನಮಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು 'ಚೋರ್ ಗಡ್ಡಿ ಛೋರ್' ಎಂಬ ಘೋಷಣೆಯನ್ನು ಕೂಗಿದರು" ಎಂದು ತಿಳಿಸಿದರು.
ನಾನು ಬಿಜೆಪಿ ಜನರಿಗೆ ಹೇಳಲು ಬಯಸುತ್ತೇನೆ. ಅಣು ಬಾಂಬ್‌ಗಿಂತ ದೊಡ್ಡದಾದ ಯಾವುದನ್ನಾದರೂ ನೀವು ಕೇಳಿದ್ದೀರಾ, ಅದು ಹೈಡ್ರೋಜನ್ ಬಾಂಬ್. ಬಿಜೆಪಿ ಜನರೇ ಸಿದ್ಧರಾಗಿರಿ, ಹೈಡ್ರೋಜನ್ ಬಾಂಬ್ ಬರುತ್ತಿದೆ. ಜನರು ಶೀಘ್ರದಲ್ಲೇ ಮತಗಳ್ಳತನದ ವಾಸ್ತವತೆಯನ್ನು ಅರಿತುಕೊಳ್ಳಲಿದ್ದಾರೆ. ಹೈಡ್ರೋಜನ್ ಬಾಂಬ್ ಬಂದ ಬಳಿಕ ನರೇಂದ್ರ ಮೋದಿ ಜಿ ದೇಶಕ್ಕೆ ತಮ್ಮ ಮುಖ ತೋರಿಸಲು ಸಾಧ್ಯವಾಗುವುದಿಲ್ಲ ಇದನ್ನು ನಾನು ನಿಮಗೆ ಖಾತರಿ ನೀಡುತ್ತಿದ್ದೇನೆ ಎಂದು ಮತ್ತೊಂದು ದಾಖಲೆ ಬಹಿರಂಗ ಪಡಿಸುವ ಸೂಚನೆಯನ್ನು ನೀಡಿದರು.
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ಜೊತೆಗೆ ಕರ್ನಾಟಕದ ಬೆಂಗಳೂರು ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಹೇಗೆ ಮತಗಳ್ಳತನ ಮಾಡಲಾಗಿದೆ ಎಂದು ನಮ್ಮ ಪಕ್ಷ ಈಗಾಗಲೇ ಪುರಾವೆ ಸಮೇತ ತೋರಿಸಿದೆ ಎಂದು ಇದೇ ವೇಳೆ ಹೇಳಿದರು.
ಬಿಹಾರದ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ವಿರೋಧಿಸಿ ಆಗಸ್ಟ್ 17ರಂದು ಸಸರಾಮ್ನಿಂದ ಆರಂಭವಾಗಿದ್ದ ಮತದಾರ ಅಧಿಕಾರ ಯಾತ್ರೆ ಇಂದು ಪಾಟ್ನಾದಲ್ಲಿ ಸಮಾರೋಪವಾಯಿತು. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ವಿಕಾಸಶೀಲ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ, ಸಿಪಿಐ (ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ, ಸಿಪಿಐನ ಆನಿ ರಾಜಾ, ಟಿಎಂಸಿ ಸಂಸದ ಯೂಸುಫ್ ಪಠಾಣ್, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಮತ್ತು ಇತರ ಇಂಡಿಯಾ ಬ್ಲಾಕ್ ನಾಯಕರು ಉಪಸ್ಥಿತರಿದ್ದರು. (ಏಜೆನ್ಸೀಸ್)