ನಟಿ ಶ್ರುತಿ ಹಾಸನ್​ ವಿರುದ್ಧ ಬಿಜೆಪಿ ಕಿಡಿ: ಕ್ರಿಮಿನಲ್​ ಕೇಸ್​ ದಾಖಲಿಸಲು ಒತ್ತಾಯ..!

Shruti Haasan
Published on

ಚೆನ್ನೈ: ಮತಗಟ್ಟೆ ಒಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಆರೋಪಿಸಿ, ಮಕ್ಕಳ್​ ನಿಧಿ ಮೈಯಂ (ಎಂಎನ್​ಎಂ) ಪಕ್ಷದ ಮುಖ್ಯಸ್ಥ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮಂಗಳವಾರ ನಡೆದ ಮತದಾನದ ವೇಳೆ ಪರಿಶೀಲನೆಗೆಂದು ಕೊಯಮತ್ತೂರಿನ ದಕ್ಷಿಣ ವಿಭಾಗದ ಮತಗಟ್ಟೆಗೆ ಕಮಲ್​ ಹಾಸನ್ ಭೇಟಿ ನೀಡಿದ್ದರು. ಈ ವೇಳೆ ಶ್ರುತಿ ಹಾಸನ್​ ಸಹ ತಂದೆಯ ಜತೆಯಲ್ಲಿ ಮತಗಟ್ಟೆಗೆ ಬಂದಿದ್ದರು. ಹೀಗಾಗಿ ಅತಿಕ್ರಮ ಪ್ರವೇಶ ಎಂದು ಬಿಜೆಪಿ ದೂರು ದಾಖಲಿಸಿದೆ.

ಮಂಗಳವಾರ ನಡೆದ ಮತದಾನದ ವೇಳೆ ಚೆನ್ನೈನಲ್ಲಿ ಪುತ್ರಿಯರಾದ ಶ್ರುತಿ ಹಾಸನ್​ ಮತ್ತು ಅಕ್ಷರ ಹಾಸನ್​ ಜತೆಯಲ್ಲಿ ಮತ ಚಲಾಯಿಸಿದ ಕಮಲ್​ ಹಾಸನ್​, ಅಲ್ಲಿಂದ ನೇರವಾಗಿ ತಮ್ಮ ಕ್ಷೇತ್ರ ದಕ್ಷಿಣ ಕೊಯಮತ್ತೂರಿಗೆ ಭೇಟಿ ನೀಡಿದರು.

ಮತಗಟ್ಟೆ ಪರಿಶೀಲಿಸಿದ ಕಮಲ್​ ಹಾಸನ್​, ತಮಿಳುನಾಡು ಚುನಾವಣೆಯನ್ನು ಗೆಲ್ಲಲು ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರಿದರು.

ಆದರೆ, ಬಿಜೆಪಿಯು ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ವಿರುದ್ಧ ತಿರುಗಿಬಿದ್ದಿದೆ. ಮತಗಟ್ಟೆಗೆ ಅತಿಕ್ರಮ ಪ್ರವೇಶ ಮಾಡಿದ ಶ್ರುತಿ​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕಮಲ್​ ವಿರುದ್ಧ ಇದೇ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಬಿಜೆಪಿ ಮಹಿಳಾ ವಿಭಾಗದ ನಾಯಕಿ ವಾನಥಿ ಶ್ರೀನಿವಾಸನ್​ ಪರವಾಗಿ ಕೊಯಮತ್ತೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ನಂದಕುಮಾರ್​ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಮತಗಟ್ಟೆ ಏಜೆಂಟ್​ ಬಿಟ್ಟು ಬೇರೆ ಯಾರು ಸಹ ಕೇಂದ್ರದ ಒಳಗೆ ಹೋಗಬಾರದು ಎಂಬ ನಿಯಮವಿದೆ. ಹೀಗಾಗಿ ಅತಿಕ್ರಮ ಪ್ರವೇಶ ಮಾಡಿದ ಶ್ರುತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net