ಬಿಜೆಪಿಯಿಂದ ಮಹಿಳೆಯರಿಗೆ ಮನ್ನಣೆ

3sri-2
ಶೃಂಗೇರಿಯಲ್ಲಿ ಬಿಜೆಪಿ ಮಂಡಲ ಆಯೋಜಿಸಿದ್ದ ಸಭೆಯಲ್ಲಿ ಗ್ರಾಪಂನ ನೂತನ ಅಧ್ಯಕ್ಷರನ್ನು ಮಾಜಿ ಸಚಿವ ಡಿ.ಎನ್.ಜೀವರಾಜ್ ಗೌರವಿಸಿದರು. ಜಯಶೀಲಾ, ಸುರೇಶ್, ಪ್ರವೀಣ್ ಪೂಜಾರಿ, ಉಮೇಶ್, ವೇಣುಗೋಪಾಲ್ ಇದ್ದರು.
Published on

ಶೃಂಗೇರಿ: ದೇಶದ ಅಭಿವೃದ್ಧಿಗಾಗಿ ಅವಿರತವಾಗಿ ದುಡಿದು ವಿಶ್ವದಲ್ಲಿ ಭಾರತ ದೇಶಕ್ಕೆ ಮನ್ನಣೆ ದೊರಕಿಸಿಕೊಟ್ಟ ಪ್ರಧಾನಿ ಮೋದಿ 2024ರಲ್ಲಿ ಮತ್ತೊಮ್ಮ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಚಪ್ಪರದಾಂಜನೇಯ ಸಭಾಂಗಣದಲ್ಲಿ ಸೋಮವಾರ ಬಿಜೆಪಿ ಮಂಡಲ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ 60 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ನಾಯಕರು ಮಹಿಳಾ ಮೀಸಲಾತಿ ಜಾರಿಗೊಳಿಸದೆ ಮೌನಕ್ಕೆ ಶರಣಾಗಿದ್ದರು. ಆದರೆ ನರೇಂದ್ರ ಮೋದಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಿ ಮನ್ನಣೆ ನೀಡಿದ್ದಾರೆ.
ಶೃಂಗೇರಿ ನೂರು ಬೆಡ್ ಆಸ್ಪತ್ರೆ, ಎಲೆಚುಕ್ಕೆ ರೋಗ ಪರಿಹಾರಕ್ಕೆ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಡಲಿಲ್ಲ. ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಯಾವ ಕಚೇರಿಗಳಲ್ಲೂ ಸ್ಪಂದಿಸುತ್ತಿಲ್ಲ. ಕ್ಷೇತ್ರದ ಶಾಸಕರಿಗೆ ಇದರ ಕುರಿತು ಗಮನ ನೀಡಲು ಸಮಯ ಇಲ್ಲ ಅನಿಸುತ್ತದೆ. ಅಧಿಕಾರಿಗಳು ಸಮಾಜದ ಕಟ್ಟಕಡೆಯ ಜನರ ಸಮಸ್ಯೆಗಳನ್ನು ಆಲಿಸಬೇಕು. ಆದರೆ ಅಧಿಕಾರಿಗಳ ನಿರಂತರ ದಬ್ಬಾಳಿಕೆಯಿಂದ ರೈತರು ಸೋತು ಹೋಗಿದ್ದಾರೆ ಎಂದರು.
ಅಡ್ಡಗದ್ದೆ, ವಿದ್ಯಾರಣ್ಯಪುರ, ಕೆರೆಕಟ್ಟೆ ಗ್ರಾಪಂಗಳ ನೂತನ ಅಧ್ಯಕ್ಷರಾದ ರಾಘವೇಂದ್ರ ಹಂಚಲಿ, ಪ್ರವೀಣ್ ಪೂಜಾರಿ, ಲಕ್ಷ್ಮೀಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ತಲಗಾರು, ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್,ನೂತನ್‌ಕುಮಾರ್, ಜಿಪಂ ಮಾಜಿ ಸದಸ್ಯರಾದ ಬಿ.ಶಿವಶಂಕರ್, ಶಿಲ್ಪಾ ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net