

ಕೊಪ್ಪ: ಕುಡಿಯುವ ನಿರೋದಗಿಸುವ ಹುಚ್ಚುರಾಯರ ಕೆರೆಯ (ಹಿರಿಕೆರೆ) ಮೇಲ್ಬಾಗದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಕಾಮಗಾರಿಯನ್ನು ತಾಲೂಕು ಆಡಳಿತ ಕೂಡಲೇ ನಿಲ್ಲಿಸಬೇಕು. ಶಾಸಕರು ಲೇಔಟ್ ಅನುಮೋದನೆ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿ ಬುಧವಾರ ಪಪಂ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಹುಚ್ಚುರಾಯರು ಭೂಮಿಯನ್ನು ದಾನವಾಗಿ ನೀಡಿದ ಪರಿಣಾಮ ಈಗ ಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ಈ ಹಿಂದೆ ಸ್ಥಗಿತಗೊಂಡಿದ್ದ ಲೇಔಟ್ ಕಾಮಗಾರಿಯನ್ನು ಪುನಃ ಆರಂಭಿಸಿರುವುದರಿಂದ ಹುಚ್ಚುರಾಯರ ಕೆರೆ ಕಲುಷಿತಗೊಳುತ್ತಿದೆ. ಇದರಿಂದ ಪಟ್ಟಣದ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೆ ಜಿಲ್ಲಾಡಳಿತ ಲೇಔಟ್ ಕೆಲಸ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಎಸ್.ಎನ್.ರಾಮಸ್ವಾಮಿ ಮಾತನಾಡಿ, 1997ರಲ್ಲಿ ಲೇಔಟ್ ನಿರ್ಮಾಣಕ್ಕೆ ನಗರ ಯೋಜನೆ ಇಲಾಖೆ ಅನುಮೋದನೆ ನೀಡಿತು. ನಂತರ ಗೋವಿಂದೇಗೌಡರು ಪಟ್ಟಣ ಜನತೆ ಪರವಾಗಿ ನಿಂತ ಕಾರಣ ಲೇಔಟ್ ನಿರ್ಮಾಣ ಸ್ಥಗಿತಗೊಂಡಿತು. ಅಂದಿನ ಪಪಂ ಅಧ್ಯಕ್ಷರಾಗಿದ್ದ ಕೃಷ್ಣ ಅವರೂ ಲೇಔಟ್ ನಿಮಾರ್ಣವಾಗದಂತೆ ನಿರ್ಣಯ ಮಾಡಿದ್ದರು. ಈಗ ನಿರ್ಣಯ ಮಾಡಿರುವ ಕಡತಗಳು ಪಂಚಾಯಿತಿಯಲ್ಲಿ ನಾಪತ್ತೆಯಾಗಿವೆ ಎಂಬ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಮಂಜುಳಾ ಹೆಗಡಾಳ ಭೇಟಿ ನೀಡಿ ಮಾತನಾಡಿ, ಲೇಔಟ್ ನಿರ್ಮಾಣದಿಂದ ಹಿರಿಕೆರೆ ನೀರು ಕಲುಷಿತವಾಗುವ ಬಗ್ಗೆ ಮೇಲಧಿಕಾರಿಗಳ ಜತೆಯಲ್ಲಿ ಮಾತನಾಡುತ್ತೇನೆ. ಅಧಿಕಾರಿಗಳು ಸೂಚಿಸಿದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಜಿಲ್ಲಾ ಕಾರ್ಯದರ್ಶಿ ಸತೀಶ್ ಅದ್ದಡ, ಬಿಜೆಪಿ ಮುಖಂಡರಾದ ಅರುಣ್ ಶಿವಪುರ, ದಿವಾಕರ್ ಭಟ್, ಉದಯ್‌ಕುಮಾರ್ ಜೈನ್, ರೇವಂತ್ ಗೌಡ, ಎಚ್.ಆರ್.ಜಗದೀಶ್, ಪಪಂ ಸದಸ್ಯ ಇದಿನಬ್ಬ, ರೇಖಾ, ಸುಜಾತಾ ಇತರರಿದ್ದರು.