

ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಇದ್ದರೂ ಅಧಿಕಾರ ಹಿಡಿದಿದ್ದು ಬಿಜೆಪಿ. ಅದರಲ್ಲೂ ಇದೇ ಮೊದಲ ಬಾರಿಗೆ ಬಿಜೆಪಿ ಗದ್ದುಗೆಗೆ ಏರುವ ಮೂಲಕ ಹೊಸ ದಾಖಲೆ ಬರೆದಿದೆ. ಆದರೆ ಇದು ಸಾಧ್ಯವಾಗಿದ್ದು ಮಾತ್ರ ಆಪರೇಶನ್ ಕಮಲದ ಮೂಲಕ.
ನಗರಸಭಾ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಆನಂದ್ ರೆಡ್ಡಿ ಬಾಬು ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ನ ವೀಣಾರಾಮು ಆಯ್ಕೆಯಾಗಿದ್ದಾರೆ. ನಗರಸಭೆಯ 31 ಸದಸ್ಯರ ಪೈಕಿ ಕಾಂಗ್ರೆಸ್ 16, ಬಿಜೆಪಿ 9, ಪಕ್ಷೇತರ 4 ಮತ್ತು ಜೆಡಿಎಸ್ 2 ಸದಸ್ಯರಿದ್ದಾರೆ. ಪಕ್ಷ ಸ್ಪಷ್ಟ ಬಹುಮತವನ್ನು ಹೊಂದಿದ್ದರೂ ಕಾಂಗ್ರೆಸ್ ನ ಅಂಬಿಕಾ ನಾರಾಯಣಸ್ವಾಮಿ ಅಧ್ಯಕ್ಷ ಸ್ಥಾನಕ್ಕೆ ಪಡೆದ ಮತ ಕೇವಲ 9. ಉಳಿದಂತೆ ಆನಂದ್ ರೆಡ್ಡಿ 22 ಮತಗಳೊಂದಿಗೆ ಗೆಲುವಿನ ನಗೆ ಬೀರಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಅವರ ಆಪರೇಷನ್ ಕಮಲ ತಂತ್ರಗಾರಿಕೆಯಲ್ಲಿ ಬಿಜೆಪಿ 9, ಪಕ್ಷೇತರ 4, ಜೆಡಿಎಸ್ 2 ಮತ್ತು ಕಾಂಗ್ರೆಸ್ 4 ಮತಗಳು, ಸಂಸದ, ಶಾಸಕ, ವಿಧಾನಪರಿಷತ್ ಸದಸ್ಯ ಮತ ಸೇರಿ ಮತ ಬಲ 22 ಆಗಿದೆ. ಉಳಿದಂತೆ ಕಾಂಗ್ರೆಸ್ನ 3 ಸದಸ್ಯರು ತಟಸ್ಥವಾಗಿ ಉಳಿಯುವ ಮೂಲಕ ಸ್ವಪಕ್ಷೀಯರಿಗೆ ಹೊಡೆತ ಕೊಟ್ಟರು. ಮತ್ತೊಂದೆಡೆ ಹಿಂದೆ ಕೇವಲ ಒಂದೇ ಒಂದು ಸದಸ್ಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಿದ್ದ ಬಿಜೆಪಿ ಗದ್ದುಗೇರುವ ಮೂಲಕ ಹೊಸ ದಾಖಲೆ ಬರೆದಿದೆ.