

ಬೆಂಗಳೂರು: ಬಿಜೆಪಿಯ ಅನೇಕ ನಾಯಕರು ಮಹಿಳೆಯರ ಬಗ್ಗೆ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ಅವರ ಕುಟುಂಬದಲ್ಲಿನ ಹೆಣ್ಣು ಮಕ್ಕಳಿಗೆ ತಾಯಿಗೆ, ಮಡದಿಗೂ ಗೌರವ ನೀಡುವುದಿಲ್ಲ ಎನಿಸುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್(DK Suresh) ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದರು.
ಬಿಜೆಪಿಯವರು ಸಿಬಿಐ ಸಂಸ್ಥೆಯನ್ನು ತಮ್ಮ ಮನೆ ಸರಕಿನಂತೆ ಭಾವಿಸಿದ್ದಾರೆ. ಮನೆಗೆಲಸದವರನ್ನು ಬಳಸಿಕೊಂಡಂತೆ ಸಿಬಿಐ ಬಳಸಿಕೊಳ್ಳುವ ಪ್ರವೃತ್ತಿ ಎದ್ದು ಕಾಣುತ್ತಿದೆ. ಸಿ.ಟಿ. ರವಿ ಆಡಿರುವ ಮಾತು, ನಡೆದುಕೊಂಡಿರುವ ರೀತಿ, ಪದೇ ಪದೆ ಹೆಣ್ಣು ಮಕ್ಕಳ ಬಗ್ಗೆ ಆಡಿರುವ ಮಾತು ಬಿಜೆಪಿಗೆ ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದರು.
ಸಂಸ್ಕೃತಿ ಬಗ್ಗೆ ಮಾತನಾಡುತ್ತಾ ಜನರ ಮುಂದೆ ಬರುವ ಬಿಜೆಪಿಗರಿಗೆ ಆ ಸಂಸ್ಕೃತಿ ಎಲ್ಲಿ ಹೋಯ್ತು? RSS ಹೇಳಿಕೊಡುವ ಸಂಸ್ಕೃತಿ ಇದೇನಾ? ಬಿಜೆಪಿ ನಾಯಕರು ನಿರಂತರವಾಗಿ ಮಹಿಳೆಯರ ಜತೆ ನಡೆದುಕೊಳ್ಳುವ ರೀತಿ ನೀತಿಯನ್ನು ರಾಜ್ಯದ ಜನ ಗಮನಿಸಬೇಕು ಎಂದರು.
ಬಿಜೆಪಿ ನಾಯಕರಿಗೆ ಸಂಸ್ಕೃತಿ ಬಗ್ಗೆ ಪಾಠ ಮಾಡುವ RSS ನವರು ಈಗಲಾದರೂ ಅವರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರವಿ ಅವರ ಹೇಳಿಕೆಯನ್ನು ಬಿಜೆಪಿಯ ಯಾವುದೇ ನಾಯಕನ ಬಳಿ ಖಂಡಿಸಲು ಮಾತುಗಳು ಇಲ್ಲ. ಹೆಣ್ಣಿನ ಕುಲಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸದಿದ್ದಾಗ ಮಾಧ್ಯಮ ಸ್ನೇಹಿತರು ಅವರಿಗೆ ಬೆಂಬಲ ನೀಡುವುದೇಕೆ? ಎಂದು ಪ್ರಶ್ನಿಸಿದರು.
ಕನ್ನಡಿಗರು ಸುಸಂಸ್ಕೃತರು ಎಂಬ ಭಾವನೆ ದೇಶದಲ್ಲಿದೆ. ವಿರೋಧ ಪಕ್ಷಗಳ ನಾಯಕರು ಪದೇ ಪದೆ ಮಹಿಳೆಯರ ವಿರುದ್ಧ ಧೋರಣೆ ಅನುಸರಿಸುತ್ತಿರುವುದರಿಂದ ರಾಜ್ಯದ ಗೌರವ ಕಡಿಮೆಯಾಗುವುದಿಲ್ಲವೇ? ಕಳೆದ ಹತ್ತು ವರ್ಷಗಳಿಂದ ಮಹಿಳೆಯರ ಮೇಲೆ ಬಿಜೆಪಿ ನಾಯಕರ ಉಪಟಳಗಳು ಹೆಚ್ಚಾಗಿವೆ. ಇದೆಲ್ಲವನ್ನು ನೋಡಿದಾಗ, ಮೌಲ್ಯಗಳು ಕುಸಿಯುತ್ತಿವೆ, ಓಲೈಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.