ಬಿಜೆಪಿ ರಾಜ್ಯ ಸಂಘಟನೆಗೆ ಹೊಸ ಪದಾಧಿಕಾರಿಗಳ ನೇಮಕ: ಲಿಂಬಾವಳಿಗೇಕಾಯ್ತು ಹಿನ್ನಡೆ?

bjp
Published on

ಬೆಂಗಳೂರು: ಸಂಘಟನಾತ್ಮಕ ನೆಲೆಯಲ್ಲಿ ಸಮತೋಲಿತವಾದರೂ ಉಪಾಧ್ಯಕ್ಷರ ಸಂಖ್ಯೆಯನ್ನು ತುಸು ಹೆಚ್ಚಿಗೆ ಹೊಂದಿದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದೆ. ಪಕ್ಷದ ಹೈಕಮಾಂಡ್ ಈ ವಿಷಯದಲ್ಲೂ ಅಳೆದು-ತೂಗಿ ರಾಜ್ಯ ಶಿಫಾರಸು ಮಾಡಿದ ಪಟ್ಟಿಗೆ ಅಸ್ತು ಎಂದಿದೆ.

ಪಕ್ಷದ ರಾಜ್ಯಾಧ್ಯಕ್ಷರಾಗಿ ನಳಿನ್​ಕುಮಾರ್ ಕಟೀಲ್ ಜವಾಬ್ದಾರಿ ಸ್ವೀಕರಿಸಿದ ಒಂದು ವರ್ಷದ ಬಳಿಕ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಮುಂಬರುವ ಗ್ರಾಮ ಪಂಚಾಯಿತಿ ಸೇರಿ ಎಲ್ಲ ಹಂತದ ಚುನಾವಣೆಗೆ ಸಂಘಟನೆಯಲ್ಲಿ ಹುರುಪು ತುಂಬಲು ರಾಜ್ಯಮಟ್ಟದ ಪಡೆಯನ್ನು ಸಜ್ಜುಗೊಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ಸೀಮಿತರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿದ್ದ ಎನ್.ರವಿಕುಮಾರ್ ಮತ್ತು ಮಹೇಶ್ ಟೆಂಗಿನಕಾಯಿ ಮತ್ತದೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಲಿಂಬಾವಳಿಗೆ ಹಿನ್ನಡೆ?: ಬಿಎಸ್​ವೈ ಸಿಎಂ ಆದ ಬಳಿಕ ತೆರವಾದ ಅಧ್ಯಕ್ಷ ಹುದ್ದೆಯ ರೇಸ್​ನಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಇದ್ದರು. ಕಟೀಲ್ ಅಧ್ಯಕ್ಷರಾದ ಬಳಿಕ ಸಚಿವ ಪದವಿಯ ಪ್ರಬಲ ಆಕಾಂಕ್ಷಿಯಾಗಿದ್ದರೆ, ಇದೀಗ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಷ್ಟೇನೂ ಮಹತ್ವ ಹಾಗೂ ಹೊಣೆಗಾರಿಕೆ ಇಲ್ಲದ ಹುದ್ದೆ ನೀಡಿರುವ ಕಾರಣ ಲಿಂಬಾವಳಿಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಲಾ 10 ಉಪಾಧ್ಯಕ್ಷರು, ಕಾರ್ಯದರ್ಶಿಗಳು, ತಲಾ ಇಬ್ಬರು ಖಜಾಂಚಿಗಳು ಹಾಗೂ ಪ್ರಕೋಷ್ಠ ಸಂಯೋಜಕರ ಬಲದ ಜತೆಗೆ ವಿವಿಧ ಮೋರ್ಚಾಗಳ ರಾಜ್ಯಾಧ್ಯಕ್ಷರನ್ನು ನೇಮಿಸಲಾಗಿದೆ. ಒಟ್ಟಾರೆ ಅರ್ಧದಷ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.

ಹೈಕಮಾಂಡ್ ಮತ್ತೊಂದು ಸಂದೇಶ: ರಾಜ್ಯಸಭೆ, ವಿಧಾನಪರಿಷತ್ ಸದಸ್ಯರ ಆಯ್ಕೆ ಹಾಗೂ ನಾಮಕರಣದಂತೆ ಪದಾಧಿಕಾರಿಗಳ ನೇಮಕದಲ್ಲೂ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿಗೆ ಮಹತ್ವದ ಜವಾಬ್ದಾರಿ ನೀಡಿದ್ದು, ರಾಜ್ಯಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಸುವುದು ವರಿಷ್ಠರ ಇಚ್ಚೆಯಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಗಸ್ತಿ ಅಧ್ಯಕ್ಷರಾಗಿದ್ದು, ಅವರು ಪ್ರತಿನಿಧಿಸುವ ಸಮುದಾಯದ ಜತೆಗೆ ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳನ್ನು ಸೆಳೆದು ಪಕ್ಷಕ್ಕೆ ಗಟ್ಟಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಸ್ವತಃ ರೈತರಾದ ಕಡಾಡಿ ಅವರನ್ನು ರೈತ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಿ ಅರ್ಥಪೂರ್ಣಗೊಳಿಸಲಾಗಿದೆ. ಕಾಂಗ್ರೆಸ್​ನಿಂದ ಈಚೆಗಷ್ಟೇ ಬಿಜೆಪಿ ಸೇರಿದ ಡಾ.ಸಂದೀಪ್ ಅವರನ್ನು ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಿರುವುದು ಅಚ್ಚರಿಗೀಡು ಮಾಡಿದೆ. ವಕ್ತಾರರಾಗಿದ್ದ ಅಶ್ವತ್ಥನಾರಾಯಣ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಡ್ತಿ ಪಡೆದಿದ್ದು, ಅವರ ಸ್ಥಾನಕ್ಕೆ ಮಾಜಿ ಎಂಎಲ್ಸಿ ಕ್ಯಾ.ಗಣೇಶ್ ಕಾರ್ಣಿಕ್ ಅವರಿಗೆ ಅವಕಾಶ ನೀಡಲಾಗಿದೆ. ಪಕ್ಷದಲ್ಲಿ ಬಣ ಎಂಬುದರ ಬದಲಿಗೆ ಸಂಘಟನೆ ದೃಷ್ಟಿಕೋನ ಹೊಂದಿದ್ದು, ಎಲ್ಲ ಸಮುದಾಯಗಳು ಹಾಗೂ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂಬ ವಿಶ್ಲೇಷಣೆ ಪಕ್ಷದಲ್ಲಿದೆ.

ಪದಾಧಿಕಾರಿಗಳ ಪಟ್ಟಿ

ಉಪಾಧ್ಯಕ್ಷರು: ಅರವಿಂದ ಲಿಂಬಾವಳಿ, ನಿರ್ಮಲ್ ಕುಮಾರ್ ಸುರಾನಾ, ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್, ತೇಜಸ್ವಿನಿ ಅನಂತಕುಮಾರ್, ಪ್ರತಾಪ್ ಸಿಂಹ, ಎಂ.ಬಿ.ನಂದೀಶ್, ಬಿ.ವೈ.ವಿಜಯೇಂದ್ರ, ಎಂ.ಶಂಕರಪ್ಪ, ಎಂ.ರಾಜೇಂದ್ರ.

ಪ್ರಧಾನ ಕಾರ್ಯದರ್ಶಿಗಳು: ಎನ್.ರವಿಕುಮಾರ್, ಸಿದ್ದರಾಜು, ಅಶ್ವತ್ಥನಾರಾಯಣ, ಮಹೇಶ್ ಟೆಂಗಿನಕಾಯಿ.

ಕಾರ್ಯದರ್ಶಿಗಳು: ಸತೀಶ್ ರೆಡ್ಡಿ, ತುಳಸಿ ಮುನಿರಾಜುಗೌಡ, ಎಸ್.ಕೇಶವ್​ಪ್ರಸಾದ್, ಜಗದೀಶ್ ಹಿರೇಮನಿ, ಸುಧಾ ಜಯರುದ್ರೇಶ್, ಭಾರತಿ ಮಗ್ದುಂ, ಹೇಮಲತಾ ನಾಯಕ್, ಉಜ್ವಲಾ ಬಡವಣ್ಣಾಚೆ, ಕೆ.ಎಸ್.ನವೀನ್, ವಿನಯ್ ಬಿದರೆ.

ಖಜಾಂಚಿಗಳು: ಸುಬ್ಬನರಸಿಂಹ, ಲೆಹರ್ ಸಿಂಗ್ ಸಿರೊಯ.

ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್ ಅಂಬೇಕಲ್ಲು.

ವಕ್ತಾರ: ಕ್ಯಾ.ಗಣೇಶ್ ಕಾರ್ಣಿಕ್

ಪ್ರಕೋಷ್ಠಗಳ ಸಂಯೋಜಕರು: ಎಂ.ಬಿ.ಭಾನುಪ್ರಕಾಶ್, ಡಾ.ಎ.ಎಚ್.ಶಿವಯೋಗಿ ಸ್ವಾಮಿ.

ಮೋರ್ಚಾ ರಾಜ್ಯಾಧ್ಯಕ್ಷರು

ಯುವ: ಡಾ.ಸಂದೀಪ್, ಮಹಿಳಾ: ಗೀತಾ ವಿವೇಕಾನಂದ, ರೈತ: ಈರಣ್ಣ ಕಡಾಡಿ, ಹಿಂದುಳಿದ ವರ್ಗಗಳು: ಅಶೋಕ್ ಗಸ್ತಿ, ಎಸ್.ಸಿ: ಛಲವಾದಿ ನಾರಾಯಣಸ್ವಾಮಿ, ಎಸ್​ಟಿ.: ತಿಪ್ಪರಾಜು ಹವಾಲ್ದಾರ್, ಅಲ್ಪಸಂಖ್ಯಾತರು: ಮುಜ್ಹಾಮಿಲ್ ಬಾಬು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net