

ಎನ್.ಆರ್.ಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ ಪ್ರತಿ ಬೂತ್‌ನಲ್ಲೂ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತ ಬರುವಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ತಾಲೂಕಿನ ಬೆಮ್ಮನೆಯಲ್ಲಿ ಭಾನುವಾರ ಸೀತೂರು ಗ್ರಾಪಂ ಮಟ್ಟದ 5 ಬೂತ್‌ಗಳ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಲನ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿಗಳನ್ನು ನಂಬಬೇಡಿ. ದೇಶದ ಹಿತಕ್ಕಾಗಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೆಲ್ಲಿಸಲು ಎರಡೂ ಪಕ್ಷದ ಮುಖಂಡರು ಶ್ರಮಿಸಬೇಕು ಎಂದರು.
ಬಿಜೆಪಿ ಹೋಬಳಿ ಘಟಕದ ಅಧ್ಯಕ್ಷ ಎಚ್.ಡಿ.ಲೋಕೇಶ್ ಮಾತನಾಡಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಬೇಕು. ಕೃಷಿ ಸಮ್ಮಾನ ಯೋಜನೆಯಡಿ ರೈತರಿಗೆ ವಷರ್ಕ್ಕೆ 6 ಸಾವಿರ ರೂ, ಜೆಜೆಎಂ ಯೋಜನೆಯಡಿ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ಕೇಂದ್ರದ ಎಲ್ಲ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಪ್ರಸ್ತುತ ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸರಳ ವ್ಯಕ್ತಿತ್ವ ಉಳ್ಳವರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರು ಬಿಜೆಪಿಯಲ್ಲಿದ್ದಾಗ ಎಲ್ಲ ಅಧಿಕಾರ ಅನುಭವಿಸಿದ್ದಾರೆ. ಈಗ ಕಾಂಗ್ರೆಸ್ ಸೇರಿ ಬಿಜೆಪಿ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಮುಖಂಡರಾದ ಎಚ್.ಇ.ದಿವಾಕರ, ಎಸ್.ಉಪೇಂದ್ರ, ಸಂದೀಪ, ಬಿ.ಎಸ್.ಶ್ರೀನಿವಾಸ, ಎ.ಎಸ್.ವೆಂಕಟರಮಣ, ಕೆ.ಎಸ್.ದಿನೇಶ, ಹರೀಶ, ಎಚ್.ಎಸ್.ಪ್ರಸನ್ನ, ರಾಮಣ್ಣ, ಮಲ್ಲಂದೂರು ಅಶೋಕ, ಬಿಜೆಪಿ ವಿವಿಧ ಬೂತ ಅಧ್ಯಕ್ಷರಾದ ರವೀಶ, ಮಂಜುನಾಥ್, ವಿಜೇಂದ್ರ, ಹಾತೂರು ಮಹೇಶ, ಜೆಡಿಎಸ್ ಮುಖಂಡರಾದ ಸುಬೋದ, ಬಿ.ಟಿ.ರವಿ, ಕೆ.ಶಿವಣ್ಣ, ಅರಳಿಕೊಪ್ಪ ಮನು, ಸುತ್ತ ಚಿನ್ನಯ್ಯ, ಪರಮೇಶ್ವರ ಇತರರಿದ್ದರು.