ಪಿ.ಬಿ.ಹರೀಶ್ ರೈ ಮಂಗಳೂರು ವಿಧಾನಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತನ್ನ ಅದೃಷ್ಟದ ಕಚೇರಿ ಪ್ರವೇಶಿಸಲು ಸಜ್ಜಾಗಿದೆ. ನಗರದ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಉದ್ಯಮಿಯೊಬ್ಬರ ಹಳೆ ಮನೆ ಬಿಜೆಪಿಯ ಚುನಾವಣಾ ಕಾರ್ಯಾಲಯವಾಗಿ ಪರಿವರ್ತನೆಯಾಗಲಿದೆ. ಕಳೆದ ಎರಡು ದಶಕದಿಂದ ಚುನಾವಣೆ ಬಂದಾಗಲೆಲ್ಲಾ ಜಿಲ್ಲಾ ಬಿಜೆಪಿ ಈ ಹಳೆ ಮನೆಗೆ ಸುಣ್ಣ ಬಣ್ಣ ಬಳಿದು ಸುಸಜ್ಜಿತಗೊಳಿಸುತ್ತದೆ. ಈ ಮನೆ ಕಾರ್ಯಾಲಯವಾದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. 2013ರ ಚುನಾವಣೆಯಲ್ಲಿ ಮಾತ್ರ ಈ ಮನೆ ಬದಲು ಪಕ್ಷದ ಜಿಲ್ಲಾ ಕಚೇರಿ ತಳಭಾಗದಲ್ಲೇ ಚುನಾವಣಾ ಕಾರ್ಯಾಲಯ ಮಾಡಲಾಗಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಹಾಗಾಗಿ ಹಳೇ ಮನೆ ಅದೃಷ್ಟದ ಕಾರ್ಯಾಲಯ ಎನ್ನುವ ನಂಬಿಕೆ ಬಿಜೆಪಿ ವಲಯದಲ್ಲಿದೆ. ಉತ್ತಮ ಸಾಧನೆ: 2004ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆದಿತ್ತು. ಪ್ರಥಮ ಬಾರಿಗೆ ಜಿಲ್ಲಾ ಬಿಜೆಪಿ ಬಂಟ್ಸ್ ಹಾಸ್ಟೆಲ್ ಬಳಿಯ ಈ ಮನೆಯನ್ನು ಚುನಾವಣಾ ಕಾರ್ಯಾಲಯವಾಗಿ ಬಳಸಿತ್ತು. ಆಗ ಬಿಜೆಪಿಯ ಡಿ.ವಿ.ಸದಾನಂದ ಗೌಡ ಮಂಗಳೂರು ಲೋಕಸಭೆ ಕ್ಷೇತ್ರದಿಂದ ಗೆದ್ದರೆ, ದ.ಕ. ಜಿಲ್ಲೆಯ 9 ವಿಧಾನಸಭೆ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಕಾರ್ಯಾಲಯದಲ್ಲಿ ರಣತಂತ್ರ: 2008ರ ವಿಧಾನಸಭೆ ಚುನಾವಣೆಯಲ್ಲೂ ಈ ಮನೆ ಕಾರ್ಯಾಲಯವಾಗಿತ್ತು. ಜಿಲ್ಲೆಯ 8 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಜಯ ಗಳಿಸಿತ್ತು. 2009ರ ಲೋಕಸಭೆ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಕಣಕ್ಕಿಳಿಸಿದ ಸಂದರ್ಭವೂ ಇದೇ ಕಾರ್ಯಾಲಯದಲ್ಲಿ ರಣತಂತ್ರ ರೂಪಿಸಿತ್ತು. ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ದಾಖಲಿಸಲು ಯಶಸ್ವಿಯಾಗಿತ್ತು. ಕೈ ಕೊಟ್ಟ ಅದೃಷ್ಟ: 2013ರ ವಿಧಾನಭೆ ಚುನಾವಣೆಯಲ್ಲಿ ಅದೃಷ್ಟದ ಕಾರ್ಯಾಲಯವನ್ನು ತೊರೆದ ಬಿಜೆಪಿ ಕೊಡಿಯಾಲ್‌ಬೈಲ್‌ನಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಕೆಳಗೆ ಚುನಾವಣಾ ಕಾರ್ಯಾಲಯ ತೆರೆದಿತ್ತು. ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸೋಲು ಕಂಡಿತು. ಒಂದೇ ವರ್ಷದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾದಾಗ ಬಿಜೆಪಿ ಮತ್ತೆ ಈ ಹಳೆ ಮನೆಯಲ್ಲೇ ಚುನಾವಣಾ ಕಾರ್ಯಾಲಯ ತೆರೆದಿತ್ತು. ದಾಖಲೆ ಮತಗಳ ಅಂತರದಲ್ಲಿ ಪಕ್ಷದ ಅಭ್ಯರ್ಥಿ ಗೆದ್ದಿದ್ದರು. ಮತ್ತೆ ಖುಲಾಯಿಸಿದ ಅದೃಷ್ಟ: ಬಿಜೆಪಿ 2018ರ ವಿಧಾನಸಭೆ ಚುನಾವಣೆಯಲ್ಲೂ ಅದೇ ಮನೆಯಲ್ಲಿ ಕಾರ್ಯಾಲಯ ತೆರೆದು ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಆ ಮನೆ ಕಾರ್ಯಾಲಯವಾಗಿ ಜಯ ಸಾಧಿಸಿತ್ತು. ಈಗ ಮತ್ತೆ ಅದೃಷ್ಟದ ಕಚೇರಿ ಪ್ರವೇಶಿಸಲು ಸಜ್ಜಾಗಿದ್ದು, ಮನೆಯ ಆವರಣ ಹಾಗೂ ಒಳ ಭಾಗದಲ್ಲಿ ದುರಸ್ತಿ ಕಾರ್ಯ ಶುರುವಾಗಿದೆ.
ಬಂಟ್ಸ್ ಹಾಸ್ಟೆಲ್ ಬಳಿ ಇರುವ ಈ ಮನೆ ನಗರದ ಕೇಂದ್ರ ಭಾಗದಲ್ಲಿರುವ ಕಾರಣ ಪಕ್ಷದ ಕಾರ್ಯಕರ್ತರಿಗೆ ಬರಲು ಅನುಕೂಲವಾಗುತ್ತದೆ. ಹಿಂದಿನ ಚುನಾವಣೆಗಳಲ್ಲಿ ಈ ಮನೆಯನ್ನು ಚುನಾವಣಾ ಕಾರ್ಯಾಲಯವಾಗಿ ಬಳಸಿದ್ದೆವು. ಈ ಚುನಾವಣೆಯಲ್ಲೂ ಕಾರ್ಯಾಲಯವಾಗಿ ಬಳಸಲು ನಿರ್ಧರಿಸಿದ್ದೇವೆ. ಕೆಲವು ದುರಸ್ತಿ ಕಾರ್ಯಗಳ ಬಳಿಕ ಪೂಜೆ ನೆರವೇರಿಸಿ ಅಧಿಕೃತ ಉದ್ಘಾಟನೆ ನಡೆಯಲಿದೆ. ಸುದರ್ಶನ ಮೂಡುಬಿದಿರೆ, ಅಧ್ಯಕ್ಷರು, ದ.ಕ. ಜಿಲ್ಲಾ ಬಿಜೆಪಿ