

ಬೆಂಗಳೂರು: ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಮಾಡುತ್ತಿದ್ದಂತೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆವರಿಳಿಯತೊಡಗಿದೆ. ದಲಿತ ಸಮುದಾಯ ಬಿಜೆಪಿ ಜತೆಗೆ ಮುನ್ನಡೆಯುತ್ತಿರುವುದು ಸಿದ್ದರಾಮಯ್ಯ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ದಲಿತ ಸಮುದಾಯದ ದಾರಿ ತಪ್ಪಿಸಿ ತಮ್ಮ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದರು ಎಂದು ರಾಜ್ಯ ಬಿಜೆಪಿ ತಿಳಿಸಿದೆ.
ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಿದರುವ ಬಿಜೆಪಿ, ಅಧಿಕಾರವಿದ್ದಾಗ ಪರಿಶಿಷ್ಟ ವರ್ಗದ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರ ಮನ್ನಿಸದೆ ಕಾಲಹರಣ ಮಾಡಿತ್ತು. ಬೊಮ್ಮಾಯಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವುದು ಸಿದ್ದರಾಮಯ್ಯ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಪರಿಶಿಷ್ಟ ವರ್ಗದವರ ಏಳಿಗೆ ಸಹಿಸದ ಕಾಂಗ್ರೆಸ್ ಪಕ್ಷ ಮೀಸಲಾತಿ ಹೆಚ್ಚಳವನ್ನು ವಿರೋಧಿಸುತ್ತಾ ಬಂದಿದೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಂದಕ ಸೃಷ್ಟಿಯಾಗಿದೆ. ಸಿಎಲ್‌ಪಿ ನಾಯಕರಿಗೂ ಹೇಳದೆ ಟಿಕೆಟ್ ಫೈನಲ್ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅಬ್ಬರಿಸಿದ್ದರು. ಸಿದ್ದರಾಮಯ್ಯನವರಿಗೆ ಒಮ್ಮೆ ಅವಕಾಶ ನೀಡಿ, ಅವರ ನೇತೃತ್ವದಲ್ಲಿ ಚುನಾವಣೆ ಸೋತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದು ಮರೆತು ಹೋಯಿತೇ ಎಂದು ಸಿದ್ದರಾಮಯ್ಯ ಅವರನ್ನು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ.
ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರಚಾರ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಬೆದರಿದೆ ಎಂದು ಸರಣಿ ಟ್ವೀಟ್ ಮಾಡಿದೆ.