

ಬಾಳೆಹೊನ್ನೂರು: ಮತದಾನಕ್ಕೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಚುನಾವಣೆಯ ಹಿಂದಿನ ದಿನವಾದ ಗುರುವಾರ ಬಾಳೆಹೊನ್ನೂರು ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಭರ್ಜರಿಯಾಗಿ ಮನೆ ಮನೆ ಪ್ರಚಾರ ನಡೆಸಿದವು.
ಹತ್ತಾರು ಕಾರ್ಯಕರ್ತರ ಗುಂಪಿನೊಂದಿಗೆ ಮತಯಾಚನೆಗೆ ಅವಕಾಶವಿಲ್ಲದ ಕಾರಣ ಗುರುವಾರ ಬೆಳಗ್ಗೆಯಿಂದಲೇ ಮೂರು ಪಕ್ಷಗಳ ಕಾರ್ಯಕರ್ತರು ಸ್ವಲ್ಪ್ಪ ಸಂಖ್ಯೆಯಲ್ಲಿ ತಮ್ಮ ತಮ್ಮ ಗ್ರಾಮಗಳಲ್ಲಿ ಅಂತಿಮವಾಗಿ ಮತದಾರರನ್ನು ಓಲೈಸುವ ಯತ್ನದಲ್ಲಿ ತೊಡಗಿದ್ದರು.
ಬಾಳೆಹೊನ್ನೂರು ಸುತ್ತಮುತ್ತ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಮಾದರಿ ಮತ ಪತ್ರವನ್ನು ಹಿಡಿದು ಮನೆ ಮನೆಗೆ ತೆರಳಿ ತಮ್ಮ ಪಕ್ಷದ ಅಭ್ಯರ್ಥಿಯ ಗುರುತಿಗೆ ಮತ ನೀಡುವ ಕುರಿತು ಕೋರಿದರು.
ಮೂರು ಪಕ್ಷಗಳ ಪ್ರಮುಖ ನಾಯಕರು ಮತದಾನದ ದಿನ ಅಂತಿಮವಾಗಿ ಮತದಾರರನ್ನು ಹೇಗೆ ಓಲೈಸಬೇಕು, ಕಾರ್ಯಕರ್ತರನ್ನು ಹೇಗೆ ನಿಭಾಯಿಸಿ ಯಶಸ್ವಿಯಾಗಿ ಮತವನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಬೇಕು ಹಾಗೂ ಶಾಂತಿಯುತವಾಗಿ ಚುನಾವಣೆಯನ್ನು ಹೇಗೆ ಮುಕ್ತಾಯಗೊಳಿಸಿಕೊಳ್ಳಬೇಕು ಎಂಬ ಕುರಿತು ಚರ್ಚೆ ನಡೆಸಿ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ಮಾಡುತ್ತಿರುವುದು ಎಲ್ಲೆಡೆ ಕಂಡುಬಂದಿತು.
ಗುರುವಾರ ಸಂಜೆ 4 ಗಂಟೆಯ ಬಳಿಕ ಬಾಳೆಹೊನ್ನೂರು ಸುತ್ತಮುತ್ತಲಿನ ಮತಗಟ್ಟೆಗಳಿಗೆ ಮತಯಂತ್ರಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಮತಗಟ್ಟೆ ಅಧಿಕಾರಿಗಳು ತಂದಿದ್ದು ವಿವಿಧ ಪಕ್ಷಗಳ ಏಜೆಂಟರು ಹಾಜರಿದ್ದು ಮತಯಂತ್ರಗಳು, ಸಿಬ್ಬಂದಿಯನ್ನು ಬರಮಾಡಿಕೊಳ್ಳುವುದು ಕಂಡುಬಂದಿತು.
ಬುಧವಾರ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ ಪರವಾಗಿ ಪಟ್ಟಣದಲ್ಲಿ ಹಾಗೂ ವಿವಿಧ ಪ್ರದೇಶಗಳಲ್ಲಿ ಕಾರ್ಯಕರ್ತರು ಮನೆ, ಅಂಗಡಿ ಮುಂಗಟ್ಟುಗಳಿಗೆ ತೆರಳಿ ಅಂತಿಮ ಕ್ಷಣದಲ್ಲಿ ಮತದಾರರನ್ನು ಓಲೈಸುವ ಕೆಲಸ ಮಾಡಿದ್ದರು.