

ನವದೆಹಲಿ: ರಾಜ್ಯದಲ್ಲಿ ಕೋಲಾಹಲವೆಬ್ಬಿಸಿರುವ ಬಿಟ್ ಕಾಯಿನ್ ಹಗರಣ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೆವಾಲಾ ಶನಿವಾರ ಸುದ್ದಿಗೋಷ್ಠಿ ನಡೆಸಿ ಕೋಟ್ಯಂತರ ರೂ.ಗಳ ಹಗರಣವನ್ನು ಕರ್ನಾಟಕದ ಬಿಜೆಪಿ ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪ್ರತಿಯಾಗಿ ಬಿಜೆಪಿ ಸರ್ಕಾರದ ಪ್ರಮುಖ ಸಚಿವರು, ಮುಖಂಡರು ಸರಣಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸರ್ಕಾರ ಮತ್ತು ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಂಡರು. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಬಿಟ್ಕಾಯಿನ್ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಬಿಟ್ಕಾಯಿನ್ ಹಗರಣವನ್ನು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ಮುಂದಾಗಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಮೋದಿ ಹಾಗೂ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸಹ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಿವಿಧ ಮುಖಂಡರ ಸರಣಿ ಸುದ್ದಿಗೋಷ್ಠಿಗಳ ಮೂಲಕ ಸಮರ್ಥಿಸಿಕೊಳ್ಳಲು ಮುಂದಾಗಿದೆ. ಶನಿವಾರ ಸಂಜೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಗೂ ಮತ್ತಿತರರು ಕಾಂಗ್ರೆಸ್ ಎತ್ತಿರುವ ಸರಣಿ ಪ್ರಶ್ನೆಗಳಿಗೆ ಉತ್ತರಿಸಿ ಕಾಂಗ್ರೆಸ್ ವೈಭವೀಕರಿಸುತ್ತಿರುವ ರೀತಿ ಹಗರಣ ನಡೆದಿಲ್ಲ ಎಂದರು.
ಮತ್ತೊಂದೆಡೆ ಹ್ಯಾಕರ್ ಶ್ರೀಕಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಆಪ್ತನಿಂದಲೇ ಜಾಮೀನು ಕೊಡಿಸಲಾಗಿದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ರ್ಚಚಿಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಪಂಚರಾಜ್ಯ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಸಂದರ್ಭದಲ್ಲಿಯೇ ಬಿಟ್ ಕಾಯಿನ್ ಆರೋಪ ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವುದು ಬಿಜೆಪಿಯ ತಲೆಬಿಸಿ ಹೆಚ್ಚಿಸಿದೆ. ಈ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಲು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಅದಕ್ಕಾಗಿಯೇ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದೇಶದ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದೆ ಎಂದೇ ರಾಜಕೀಯವಾಗಿ ವ್ಯಾಖ್ಯಾನ ಮಾಡಲಾಗುತ್ತಿದೆ.
ಅಂತಾರಾಷ್ಟ್ರೀಯ ಹಗರಣ: ಕರ್ನಾಟಕದಲ್ಲಿ ತೆರೆದುಕೊಂಡಿರುವ ಕೋಟ್ಯಂತರ ರೂ.ಗಳ ಅತಿದೊಡ್ಡ ಬಿಟ್ ಕಾಯಿನ್ ಹಗರಣವನ್ನು ಕರ್ನಾಟಕದ ಬಿಜೆಪಿ ಸರ್ಕಾರ ಮುಚ್ಚಿ ಹಾಕುತ್ತಿದೆ. ರಾಷ್ಟ್ರೀಯ ತನಿಖಾ ಆಯೋಗ, ಇಂಟರ್ಪೋಲ್, ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ತನಿಖಾ ಏಜೆನ್ಸಿಗಳಿಗೆ ಯಾವುದೇ ಮಾಹಿತಿ ಹಂಚಿಕೊಳ್ಳದೆ ಹಗರಣದಿಂದ ಪಾರಾಗಲು ಷಡ್ಯಂತ್ರ ರೂಪಿಸಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿಯೂ ಆದ ಸುರ್ಜೆವಾಲ ಗಂಭೀರ ಆರೋಪ ಮಾಡಿದರು. ಇದೊಂದು ಅಂತಾರಾಷ್ಟ್ರೀಯ ಹಗರಣವಾಗಿದ್ದು, ಅನೇಕ ಬಿಜೆಪಿ ನಾಯಕರು ಭಾಗೀದಾರರಾಗಿದ್ದಾರೆ. ಬಿಟ್ ಕಾಯಿನ್ ವ್ಯವಹಾರದಲ್ಲಿ ಹ್ಯಾಕಿಂಗ್ ಮೂಲಕ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿದ್ದ ಶ್ರೀಕೃಷ್ಣ 100ಕ್ಕಿಂತಲೂ ಹೆಚ್ಚು ದಿನ ಬಂಧನದಲ್ಲಿದ್ದ. ಡಿಸೆಂಬರ್ 2020ರಲ್ಲಿ ಆತ ಬೆಂಗಳೂರಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ಗೆ ನೀಡಿದ್ದ ಹೇಳಿಕೆಯಲ್ಲಿ ವಿವಿಧ ದೇಶಗಳ ಕ್ರಿಪ್ಟೋಕರೆನ್ಸಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಸಾವಿರಾರು ಬಿಟ್ ಕಾಯಿನ್ಗಳನ್ನು ಕದ್ದಿರುವುದನ್ನು ಒಪ್ಪಿಕೊಂಡಿದ್ದ. ಹಾಗಿದ್ದರೂ, ರಾಜ್ಯ ಬಿಜೆಪಿ ಸರ್ಕಾರ 5 ತಿಂಗಳ ಕಾಲ ಜಾಣಕುರುಡನ್ನು ಪ್ರದರ್ಶಿಸಿದ್ದು ಏಕೆ ಎಂದು ಪ್ರಶ್ನಿಸಿದರು.
ಇಂಥದ್ದೊಂದು ಅಂತಾರಾಷ್ಟ್ರೀಯ ಹಗರಣದ ನೇರ ಆರೋಪಿಯಾಗಿದ್ದರೂ, 5 ತಿಂಗಳ ಕಾಲ ಸರ್ಕಾರ ಇಂಟರ್ಪೋಲ್ಗೆ ಮಾಹಿತಿಯನ್ನೇ ನೀಡಲಿಲ್ಲ. 2021 ಏಪ್ರಿಲ್ 17ರಂದು ಶ್ರೀಕೃಷ್ಣ ಜಾಮೀನಿನ ಮೂಲಕ ಬಿಡುಗಡೆಯಾದ ಬಳಿಕ ಸಿಬಿಐನ ಇಂಟರ್ಪೋಲ್ ಲಯೆಷನ್ ಅಧಿಕಾರಿಗೆ ಇಂಟರ್ಪೋಲ್ ಹಾಗೂ ಮತ್ತಿತರ ತನಿಖಾ ಏಜೆನ್ಸಿಗಳಿಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತು. 2019ರ ಆಗಸ್ಟ್ನಿಂದ 2021ರ ಜುಲೈ ತನಕ ರಾಜ್ಯದ ಗೃಹ ಸಚಿವರಾಗಿದ್ದದ್ದು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅವರೇ ಈ ಎಲ್ಲ ಅನುಮಾನಗಳನ್ನು ಬಗೆಹರಿಸಬೇಕು ಮತ್ತು ಸತ್ಯ ಏನೆಂಬುದನ್ನು ದೇಶಕ್ಕೆ ತಿಳಿಸಬೇಕು ಎಂದು ಸುರ್ಜೆವಾಲಾ ಆಗ್ರಹಿಸಿದ್ದಾರೆ.
ಸ್ವತಂತ್ರ ತನಿಖೆ ಆಗಲಿ: ಕ್ರಿಪ್ಟೋಕರೆನ್ಸಿ ವ್ಯವಹಾರಗಳ ಮೇಲೆ ನಿಗಾ ಇಡುವ ವೇಲ್ ಅಲರ್ಟ್ಸ್ ಎಂಬ ಟ್ವಿಟ್ಟರ್ ಖಾತೆಯು, 2016ರಲ್ಲಿ ಬಿಟ್ಫಿನೆಕ್ಸ್ ಬಿಟ್ಕಾಯಿನ್ ಎಕ್ಸ್ಚೇಂಜ್ ಎಂಬ ಸಂಸ್ಥೆಯಿಂದ ಹ್ಯಾಕ್ ಮಾಡಲಾಗಿದ್ದ ರೂ. 5240 ಕೋಟಿ ಮೌಲ್ಯದ ಬಿಟ್ಕಾಯಿನ್ಗಳು 2020ರ ಡಿ.1 ಮತ್ತು 2021ರ ಏಪ್ರಿಲ್ 14ರಂದು ಅಪರಿಚಿತ ವ್ಯಾಲೆಟ್ಗೆ ವರ್ಗಾವಣೆಗೊಂಡ ಬಗ್ಗೆ ಮಾಹಿತಿ ನೀಡಿತ್ತು. ಆ ವೇಳೆ ಶ್ರೀಕೃಷ್ಣ ಜೈಲಿನಲ್ಲಿದ್ದರೂ, ವರ್ಗಾವಣೆಗೊಂಡ ಬಿಟ್ಕಾಯಿನ್ಗಳನ್ನು ಶ್ರೀಕೃಷ್ಣ ಹ್ಯಾಕ್ ಮಾಡಿ ವರ್ಗಾವಣೆ ಮಾಡಿದ್ದನೇ ಎಂಬುದನ್ನು ಸ್ವತಂತ್ರ ತನಿಖಾ ಸಂಸ್ಥೆ ಮೂಲಕ ಕಂಡುಕೊಳ್ಳಬೇಕಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸುಪರ್ದಿಯಲ್ಲಿ ಈ ತನಿಖೆ ಆಗಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಬಿಟ್ಕಾಯಿನ್ ಏನಾದವು?: 2021ರ ಜ.12ರಂದು ಬೆಂಗಳೂರು ಪೊಲೀಸರು 31 ಬಿಟ್ಕಾಯಿನ್ಗಳನ್ನು (ರೂ. 9 ಕೋಟಿ ಮೌಲ್ಯ) ಶ್ರೀಕೃಷ್ಣನಿಂದ ವಶಪಡಿಸಿಕೊಂಡ ಬಗ್ಗೆ ಖಚಿತಪಡಿಸುತ್ತಾರೆ. ಅದೇ ರೀತಿ, ಜ.22ರಂದು ಶ್ರೀಕೃಷ್ಣನಿಂದ 186 ಬಿಟ್ಕಾಯಿನ್ಗಳನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ ಅಚ್ಚರಿ ಎಂಬಂತೆ, ಬೆಂಗಳೂರು ಪೊಲೀಸರು ಈ 31 ಮತ್ತು 186 ಬಿಟ್ಕಾಯಿನ್ಗಳು ವರ್ಗಾವಣೆಯಾಗಿಯೇ ಇಲ್ಲ ಎಂದು ನಂತರದಲ್ಲಿ ಹೇಳುತ್ತಾರೆ. ಈ ಅನುಮಾನಾಸ್ಪದ ನಡೆಗಳು ಸರ್ಕಾರದ ‘ರಹಸ್ಯ ಕಾರ್ಯಾಚರಣೆ’ಯತ್ತಲೇ ಬೊಟ್ಟು ಮಾಡುತ್ತಿವೆ ಎಂದು ಸುರ್ಜೆವಾಲ ಆರೋಪಿಸಿದ್ದಾರೆ.
ಬಿಟ್ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಲಾಗದ್ದನ್ನು ಬೊಮ್ಮಾಯಿ ಈ ಹಿಂದೆ ಗೃಹ ಸಚಿವರಾಗಿ ಮಾಡಿದ್ದಾರೆ. ತನಿಖೆ ಪೂರ್ಣಗೊಂಡು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಯಾರನ್ನೂ ರಕ್ಷಿಸುವುದಿಲ್ಲ. ಕಾಂಗ್ರೆಸ್ನದು ಹಿಟ್ ಅಂಡ್ ರನ್ ಹೇಳಿಕೆ.
| ಡಾ.ಕೆ.ಸುಧಾಕರ್ ಆರೋಗ್ಯ ಸಚಿವ
ಬಿಟ್ ಕಾಯಿನ್ ಹಗರಣ ದೊಡ್ಡದು. ಅದನ್ನು ಮುಚ್ಚಿ ಹಾಕುವುದು ಇದಕ್ಕಿಂತ ದೊಡ್ಡ ಹಗರಣ. ಏಕೆಂದರೆ, ಇದು ಯಾರೋ ಒಬ್ಬರ ಕೃತಕವಾದ ದೊಡ್ಡ ಪ್ರತಿಷ್ಠೆಯನ್ನು ಮುಚ್ಚಿಡುತ್ತದೆ.
| ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಇದೊಂದು ದೈತ್ಯ ಹಗರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಇನ್ನೂ ಮೌನವಾಗಿರುವುದು ಅಚ್ಚರಿ ಮೂಡಿಸಿದೆ.
| ರಣದೀಪ್ ಸಿಂಗ್ ಸುರ್ಜೆವಾಲಾ ಕಾಂಗ್ರೆಸ್ ಮುಖಂಡ
ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣ ಸದ್ದು ಮಾಡುತ್ತಿರುವ ನಡುವೆಯೇ ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟಿನ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ಸಂಜೆ ಮಹತ್ವದ ಸಭೆ ನಡೆದಿದೆ. ಹಣಕಾಸು ಅಕ್ರಮ, ಭಯೋತ್ಪಾದನೆ ಇನ್ನಿತರ ದೇಶದ್ರೋಹ ಚಟುವಟಿಕೆಗಳಿಗೆ ಕ್ರಿಪ್ಟೋಕರೆನ್ಸಿ ಮೂಲಕ ಹಣ ಸಂದಾಯವಾಗುತ್ತಿದೆ ಎಂಬ ಶಂಕೆ ವ್ಯಾಪಕವಾದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ರಿಪ್ಟೋ ವಹಿವಾಟಿನಲ್ಲಿ ಅಧಿಕ ಲಾಭ ಇದೆ ಎಂಬ ಜಾಹೀರಾತುಗಳ ಮೂಲಕ ಯುವಜನರನ್ನು ಸೆಳೆಯಲಾಗುತ್ತಿದೆ. ಇಂಥ ಕಂಪನಿಗಳು, ಜಾಹೀರಾತುಗಳಿಗೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು. ಆರ್ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯ ಈ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಸಹ ಪರಾಮರ್ಶೆ ನಡೆಸಲಾಯಿತು. ಅಕ್ರಮಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಸಭೆಯಲ್ಲಿ ರ್ಚಚಿಸಲಾಯಿತು ಎಂದು ತಿಳಿದುಬಂದಿದೆ.