

ಬೆಂಗಳೂರು: ಭಾನುವಾರ (ಮಾ.10) ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಯೋಜನೆಗಳನ್ನು ಕುರಿತು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.
"ಇಂದು ಹೊಸಕೋಟೆ ಕ್ಷೇತ್ರದಲ್ಲಿ 600 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಅಭಿವೃದ್ಧಿಗೆ ದುಡ್ಡೇ ಇಲ್ಲ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಸುಳ್ಳೇ ಮನೆದೇವರು. ನಾವು ಅಧಿಕಾರಕ್ಕೆ ಬಂದು 9 ತಿಂಗಳೊಳಗೆ 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, 36 ಸಾವಿರ ಕೋ ರೂ. ವೆಚ್ಚವಾಗಿದ್ದರೂ, ನಮ್ಮ ಖಜಾನೆ ಖಾಲಿಯಾಗಿಲ್ಲ. ಬಜೆಟ್ ನಲ್ಲಿ ಅಭಿವೃದ್ಧಿಗೆ 1.20 ಲಕ್ಷ ಕೋಟಿ ಪಾಲು ಇಟ್ಟಿದ್ದೇವೆ. 2024-25ಕ್ಕೆ 3.71 ಲಕ್ಷ ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿದ್ದೇನೆ. ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರದ ಬಜೆಟ್ ಗಿಂತ ನಮ್ಮ ಬಜೆಟ್ನ ಗಾತ್ರ ದೊಡ್ಡದು. ಇದು ರಾಜ್ಯದ ಅಭಿವೃದ್ಧಿಯ ಗುರುತಲ್ಲವೇ?" ಎಂದು ಸಿಎಂ ಹೇಳಿದರು.
"ರಾಜ್ಯದ ಜನರ ಕೈಗಳಿಗೆ ಮಧ್ಯವರ್ತಿಗಳ ಕಾಟವಿಲ್ಲದೇ ಹಣ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರವೊಂದರಲ್ಲೇ ಗೃಹಲಕ್ಷ್ಮಿ ಯೋಜನೆಯಡಿ 52 ಸಾವಿರ ಮಹಿಳೆಯರಿಗೆ 2000 ರೂ. ಹಣ ನೀಡಲಾಗುತ್ತಿದೆ. ಶಕ್ತಿ ಹಾಗೂ ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಹಣದಿಂದ ಜನರಿಗೆ ಉಳಿತಾಯವಾಗುತ್ತಿದೆ. ಈ ಎಲ್ಲ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಲಾ 4 ರಿಂದ 5 ಸಾವಿರ ರೂ. ದೊರೆಯುತ್ತಿದೆ" ಎಂದರು.
ಇದನ್ನೂ ಓದಿ: ದೇವರ ಅಗಸಿ ಪುರ್ನರ್ನಿಮಾಣ ಕಾಮಗಾರಿಗೆ ಭೂಮಿಪೂಜೆ"
"ಗ್ಯಾರಂಟಿಗಳ ಮೂಲಕ ಈ ವರ್ಷ 36 ಸಾವಿರ ಕೋಟಿ, ಮುಂದಿನ ವರ್ಷ 52 ಸಾವಿರ ಕೋಟಿ ರೂಪಾಯಿ ಜನರ ಜೇಬಿಗೆ ನೇರವಾಗಿ ಹೋಗುತ್ತಿದ್ದು, ಅವರ ಆರ್ಥಿಕ ಶಕ್ತಿ ವೃದ್ಧಿಯಾಗುತ್ತದೆ. ಶಕ್ತಿ ಯೋಜನೆಯನ್ನು ಪ್ರಶಂಸಿಸಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರು ನನಗೆ ಪತ್ರ ಬರೆದಿದ್ದರು" ಎಂದರು.
"2008-2013ರವರೆಗೆ ಬಿಜೆಪಿ ಸರ್ಕಾರವಿತ್ತು. ಆಗ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ನೀರು ತುಂಬುವ ಯೋಜನೆಗಳ ಬಗ್ಗೆ ಗಮನಹರಿಸಲಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಆನೇಕಲ್ ಕ್ಷೇತ್ರಗಳಲ್ಲಿ ಕೆರೆಗಳು ಬತ್ತಿಹೋಗಿದ್ದು, ಅವುಗಳನ್ನು ತುಂಬಿಸುವ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ, ಅನೇಕಲ್, ಹೊಸಕೋಟೆ, ಕಾಡುಬೀಸನಹಳ್ಳಿ ಯೋಜನೆಗಳ ಮೂಲಕ ಕೆರೆ ತುಂಬಿಸಲಾಯಿತು" ಎಂದರು.
"ನೆಲಮಂಗಲ, ತುಮಕೂರು ಜಿಲ್ಲೆಗಳಿಗೆ ನೀರು ಕೊಡುವ ಕೆಲಸವನ್ನು ಮಾಡಿದೆವು. ಇಂದು ಉದ್ಘಾಟನೆಯಾದ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 150 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ, ಆನೇಕಲ್, ಹೊಸಕೋಟೆ ಯೋಜನೆ ಎಲ್ಲಕ್ಕೂ ಸೇರಿ 2,809 ಕೋಟಿ ರೂ.ಗಳನ್ನು ನಮ್ಮ ಸರ್ಕಾರ ವ್ಯಯಿಸಿದೆ. 317 ಕೆರೆಗಳನ್ನು ಮೊದಲ ಹಂತದಲ್ಲಿ ತುಂಬಿಸಲಾಗಿದೆ. ಪ್ರಗತಿಯಲ್ಲಿರುವ ಎರಡನೇ ಹಂತದ ಕಾಮಗಾರಿಗಳಿಗೆ 1,699 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. 392 ಕೆರೆಗಳನ್ನು ತುಂಬಿಸಲಾಗುತ್ತಿದೆ" ಎಂದು ಹೇಳಿದರು.
"ಹೊಸದಾಗಿ ನಂದಗುಡಿ ಸೂಲಿಬೆಲೆ ಯೋಜನೆಯನ್ನೂ ಕೈಗೆತ್ತಿಕೊಂಡು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ. ಇದನ್ನು ಕೋಲಾರ, ಚಿಕ್ಕಬಳ್ಳಾಪುರ ಸುತ್ತಲಿನ ಪ್ರದೇಶಗಳಲ್ಲಿ ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ಹೆಚ್ಚಿದ್ದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಮಾಡಲಾಗುತ್ತಿದೆ. ಅಂತರ್ಜಲ ಹೆಚ್ಚಾಗಿ ಕೊಳವೆಬಾವಿಗಳಿಗೆ ನೀರು ದೊರಕಬೇಕು.1200 ಅಡಿಗಳ ಆಳದಲ್ಲಿ ಕೊಳವೆಬಾವಿ ಕೊರೆಯಲಾಗುತ್ತಿತ್ತು. ಈಗ 300 ರಿಂದ 500 ಅಡಿಯೊಳಗೆ ಕೊಳಬಾವಿಗಳಿಗೆ ನೀರು ಸಿಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಇದು ಸಾಧ್ಯವಾಗಿದೆ. ಈ ಭಾಗದಲ್ಲಿ ನದಿಗಳಿಲ್ಲದಿರುವುದರಿಂದ 15 ಟಿ.ಎಂ.ಸಿ ನೀರನ್ನು ಸಂಸ್ಕರಿಸಿ ತುಂಬಿಸಲಾಗುತ್ತದೆ. ಇದರಿಂದ ರೈತರ ಆದಾಯ ಹೆಚ್ಚಳ ಮಾಡಲು ಸಾಧ್ಯವಾಗುತ್ತದೆ" ಎಂದರು.