

ಪ್ಯಾರಿಸ್: ವಿಶ್ವ ನಂ. 1 ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಫ್ರೆಂಚ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟವೇರಿದೆ. ಈ ಮೂಲಕ ವರ್ಷದ 3ನೇ ಫೈನಲ್ನಲ್ಲಿ ಮೊದಲ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡಿದೆ. ಹಿಂದಿನ 2 ಫೈನಲ್ಗಳಲ್ಲಿ ರನ್ನರ್ಅಪ್ಗೆ ತೃಪ್ತಿಪಟ್ಟಿದ್ದರು.
ಸಾತ್ವಿಕ್-ಚಿರಾಗ್ ಜೋಡಿ ಭಾನುವಾರ ನಡೆದ ಫೈನಲ್ನಲ್ಲಿ ತೈವಾನ್ನ ಲೀ ಜೆ-ಹುಯಿ ಮತ್ತು ಯಾಂಗ್ ಪೊ-ಸುವಾನ್ ಜೋಡಿಯನ್ನು 21-11, 21-17 ನೇರಗೇಮ್ಗಳಿಂದ ಗೆಲುವು ದಾಖಲಿಸಿತು. ಇದು ಅವರಿಗೆ 2ನೇ ಫ್ರೆಂಚ್ ಓಪನ್ ಪ್ರಶಸ್ತಿಯಾಗಿದೆ. ಈ ಮುನ್ನ 2022ರಲ್ಲಿ ಮೊದಲ ಬಾರಿ ಗೆದ್ದಿದ್ದರು.
ಸಾತ್ವಿಕ್-ಚಿರಾಗ್ ಜೋಡಿ ಈ ಮುನ್ನ ಉಪಾಂತ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ದ. ಕೊರಿಯಾದ ಸೆಯೊ ಸೆಯುಂಗ್ ಜೇಯಿ ಮತ್ತು ಕಾಂಗ್ ಮಿನ್ ಹ್ಯುಕ್ ಜೋಡಿಯನ್ನು 21-13, 21-16 ನೇರಗೇಮ್ಗಳಿಂದ ಮಣಿಸಿತ್ತು. ಸಾತ್ವಿಕ್-ಚಿರಾಗ್ ಈಗ ವಿಶ್ವ ಡಬಲ್ಸ್ ರ್ಯಾಂಕಿಂಗ್ನಲ್ಲಿ 1 ಲಕ್ಷ ರ್ಯಾಂಕಿಂಗ್ ಅಂಕ ಕಲೆಹಾಕಿದ ಭಾರತದ ಮೊದಲ ಮತ್ತು ವಿಶ್ವದ 5ನೇ ಜೋಡಿ ಎನಿಸಿದ್ದಾರೆ.
ಲಕ್ಷ್ಯ ಸೇನ್ಗೆ ನಿರಾಸೆ: ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ ಸೆಮೀಸ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಥಾಯ್ಲೆಂಡ್ನ ಕುನ್ಲವುಟ್ ವಿಟಿಸರ್ನ್ ವಿರುದ್ಧ 22-20, 13-21, 11-21ರಿಂದ ಪರಾಭವಗೊಂಡರು. 1 ಗಂಟೆ 18 ನಿಮಿಷಗಳ ಕಾದಾಟದಲ್ಲಿ ಲಕ್ಷ್ಯ ಸೇನ್ ಮೊದಲ ಗೇಮ್ ಗೆದ್ದರೂ, ನಂತರದಲ್ಲಿ ಲಯ ತಪ್ಪಿದರು.