38 ಸಾವಿರ ಡಾಲರ್​ ತಲುಪಿದ ಬಿಟ್​ಕಾಯಿನ್​

BitCoin (3)
Published on

ನವದೆಹಲಿ: ವಿಶ್ವದ ಪ್ರಮುಖ ಕ್ರಿಪ್ಟೊಕರೆನ್ಸಿಯಾದ ಬಿಟ್​ಕಾಯಿನ್​ ಈ ವರ್ಷ ಮೊದಲ ಬಾರಿಗೆ 38,000 ಡಾಲರ್​ ದಾಟಿದೆ. ಶುಕ್ರವಾರದ ವಹಿವಾಟಿನಲ್ಲಿ ಶೇ. 1.5 ಏರಿಕೆ ಕಂಡು ಈ ಮಟ್ಟವನ್ನು ತಲುಪಿದೆ. ಮೇ 2022ರಲ್ಲಿ ಬಿಟ್​ ಕಾಯಿನ್​ ಇದೇ ಮಟ್ಟ ತಲುಪಿತ್ತು.

ಇತರ ಕ್ರಿಪ್ಟೊಗಳಾದ ಈಥರ್​, ಸೋಲಾನಾ ಕೂಡ ಏರಿಕೆ ಕಂಡಿದೆ. ವಿಶ್ವದ ಅತಿದೊಡ್ಡ ಕ್ರಿಪ್ಟೊ ವಿನಿಮಯ ಕೇಂದ್ರ ಬಿನಾನ್ಸ್​ನ ಸಿಇಒ ಚಾಂಗ್​ಪೆಂಗ್​ ಅಮೆರಿಕದ ನ್ಯಾಯಾಂಗ ಇಲಾಖೆ ಮಾಡಿರುವ ಕ್ರಿಮಿನಲ್​ ಆರೋಪಗಳಲ್ಲಿ ತಪ್ಪೊಪ್ಪಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಇದು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ. ಕ್ರಿಪ್ಟೊ ನಿಯಂತ್ರಣಕ್ಕೆ ಅಮೆರಿಕ ಮುಂದಾಗಿರುವ ಕಾರಣ ಇದರ ಭವಿಷ್ಯದ ಬಗ್ಗೆ ಕಳವಳ ಕಡಿಮೆ ಆಗಿದೆ. ಬಿಟ್​ಕಾಯಿನ್​ ಇಟಿಎಫ್​ಗೆ ಅಮೆರಿಕದ ಅನುಮೋದನೆ ಸಾಧ್ಯತೆ ಇದೆ. ಇದರಿಂದ ಸಾಮಾನ್ಯ ಹೂಡಿಕೆದಾರರಿಗೆ ಅನುವಾಗಲಿದೆ.

ಬಿಟ್​ಕಾಯಿನ್​ ಕಳೆದ ವರ್ಷ 25,000 ಡಾಲರ್​ ಮಟ್ಟಕ್ಕೆ ಕುಸಿತ ಕಂಡಿತ್ತು. ಜತೆಗೆ ಅಮೆರಿಕದಲ್ಲಿ ಬಡ್ಡಿದರ ಕಡಿತಗೊಳ್ಳುವ ನಿರೀಕ್ಷೆ ಇದ್ದು, ಇದು ಹೂಡಿಕೆಗೆ ಉತ್ತೇಜನ ನೀಡಿದೆ. ಹೀಗಾಗಿ ಕ್ರಿಪ್ಟೊಕರೆನ್ಸಿ ಒಟ್ಟಾರೆ ಧನಾತ್ಮಕವಾಗಿ ಮುನ್ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net