

ಬೆಂಗಳೂರು: ಬಿಟ್ ಕಾಯಿನ್ ವಿಚಾರದಲ್ಲಿ ಸರ್ಕಾರವನ್ನು ಹಣಿಯಲು ಕಾಂಗ್ರೆಸ್ ಶ್ರಮಹಾಕುತ್ತಿದ್ದು, ಪ್ರಮುಖ ನಾಯಕರು ಸಭೆ ನಡೆಸಿ ವಿಚಾರ ವಿನಿಮಯ ನಡೆಸಿದ್ದಾರೆ. ಜತೆಗೆ ತಮ್ಮ ಮೂಲಗಳಲ್ಲಿ ಮಾಹಿತಿ ಸಂಗ್ರಹಿಸುವುದರಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ನ ಕೆಲವು ನಾಯಕರು ತಮ್ಮ ಸಂಪರ್ಕದಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಮಾತನಾಡಿಸಿ, ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಸಮಯ ಬಂದಾಗ ಪಕ್ಷ ಚರ್ಚೆ ಮಾಡಿ ತನ್ನ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರ ಈಗ ಪ್ರಕರಣದಲ್ಲಿ ಪಂಚನಾಮದಿಂದ ಹಿಡಿದು ಇಡಿಗೆ ಪ್ರಕರಣ ವಹಿಸಿರುವವರೆಗೂ ಸಂಪೂರ್ಣ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು.
ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಬಳಿ ಸಾಕ್ಷಿ ಇದ್ದರೆ ನೀಡಲಿ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದೆ ಅವರು, ಕಾಂಗ್ರೆಸ್ ನಾಯಕರು ಯಾವುದೇ ಅವ್ಯವಹಾರದಲ್ಲಿ ತೊಡಗಿದ್ದರೆ ಅವರನ್ನು ಕಾನೂನು ಪ್ರಕಾರ ಗಲ್ಲಿಗೆ ಹಾಕಲಿ. ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ಯಾರ ಪರವಾಗಿಯೂ ನಿಲ್ಲುವುದಿಲ್ಲ ಎಂದರು. ಬಿಟ್ ಕಾಯಿನ್ ವಿಚಾರವಾಗಿ ಪೊಲೀಸರು ದಾಖಲು ಮಾಡಿರುವ ಎಫ್ಐಆರ್, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಹೆಸರುಗಳು, ಪ್ರಧಾನಮಂತ್ರಿಗಳಿಗೆ ಹೋಗಿರುವ ದೂರುಗಳು, ಯಾರನ್ನು ವಿವಿಧ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಸರ್ಕಾರ ಮಾಹಿತಿ ಬಹಿರಂಗ ಮಾಡಲಿ. ಕಾಂಗ್ರೆಸ್ ನಾಯಕರು ಇದರಲ್ಲಿ ಭಾಗಿಯಾಗಿದ್ದರೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಿ ಎಂದು ಹೇಳಿದರು.
ಹಿಂದೆ ಸಂದೀಪ್ ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಇಡಿಗೆ ಪ್ರಕರಣ ವಹಿಸಿರುವ ಬಗ್ಗೆ ಸಿಎಂ ಹೇಳಿಕೆ ನೀಡಿದ್ದಾರೆ. ಇದೆಲ್ಲದರ ಮಾಹಿತಿಯನ್ನು ನೀಡಲಿ. ನಾವು ಕೂಡ ಈ ವಿಚಾರವಾಗಿ ಆಂತರಿಕ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದು, ನಾವು ಕೂಡ ಸೂಕ್ತ ಸಮಯದಲ್ಲಿ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ ಎಂದು ತಿಳಿಸಿದರು.
ಬಿಟ್ ಕಾಯಿನ್ ದಂಧೆಯ ವಿಚಾರದಲ್ಲಿ ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಆಡಳಿತ ಅಥವಾ ಪ್ರತಿಪಕ್ಷ ಯಾವುದೇ ಇರಲಿ ಮೊದಲು ತನಿಖೆ ಆರಂಭಿಸಿ. ನನ್ನ ಬಳಿ ಇರುವ ಮಾಹಿತಿಯನ್ನು ಅಗತ್ಯವಿದ್ದರೆ ನ್ಯಾಯಾಲಯಕ್ಕೆ ನೀಡುತ್ತೇನೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಮತ್ತಷ್ಟು ಸಾಕ್ಷ್ಯಗಳು ಬೇಕಿವೆ. ನಾನು ಸಾಕ್ಷ್ಯಗಳ ಸಂಗ್ರಹದಲ್ಲಿ ಇದ್ದೇನೆ .
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಪ್ರತ್ಯೇಕ ದಾಖಲೆ ಸಂಗ್ರಹ: ಸಿದ್ದರಾಮಯ್ಯ ಅವರಿಗೆ ಬಿಟ್ ಕಾಯಿನ್ಗೆ ಸಂಬಂಧಿಸಿದ ದಾಖಲೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಮೀಪವರ್ತಿಗಳಿಂದ ಪ್ರತ್ಯೇಕವಾಗಿ ದಾಖಲೆ ಹುಡುಕಾಟದಲ್ಲಿದ್ದಾರೆಂದು ತಿಳಿದುಬಂದಿದೆ.
ಆಧಾರಗಳಿದ್ದರೆ ತನಿಖಾ ಸಂಸ್ಥೆ ಮುಂದಿಡಲಿ: ಬಿಟ್ಕಾಯಿನ್ ಪ್ರಕರಣದ ಬಗ್ಗೆ ಆಧಾರಗಳಿದ್ದರೆ ಕಾಂಗ್ರೆಸ್ ತನಗೆ ನಂಬಿಕೆಯಿರುವ ಯಾವುದೇ ಸಂಸ್ಥೆಯ ಮುಂದಿಟ್ಟು, ಬಹಿರಂಪಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸವಾಲೆಸೆದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬಿಟ್ಕಾಯಿನ್ ಪ್ರಕರಣದ ತನಿಖೆ ಆರಂಭಿಸಿದ್ದೇ ಬಿಜೆಪಿ ಸರ್ಕಾರ. ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜತೆಗೆ ಇದಕ್ಕೂ ಮುಂಚೆ ಯಾರ ಜತೆ ಸಂಬಂಧವಿತ್ತು ಎಂದು ಕೇಳಿದರು. ಮಲ್ಯ ಟವರ್ನಲ್ಲಿ ಆತ ಯಾರೊಂದಿಗೆ ಪಾರ್ಟಿ ಮಾಡುತ್ತಿದ್ದ. ಬಿಜೆಪಿ ಎಂಎಲ್ಎ ಮಗನ ಜತೆಗಾ ಅಥವಾ ಕಾಂಗ್ರೆಸ್ ಎಂಎಲ್ಎ ಮಗನ ಜತೆಗಾ? ಆವತ್ತು ಎಂಎಲ್ಎ ಮಗ ದೌರ್ಜನ್ಯ ನಡೆಸಿದಾಗ ಶ್ರೀಕಿ ಯಾರ ಜತೆಗಿದ್ದ. ಈ ಪ್ರಕರಣವನ್ನು ಮುಚ್ಚಿಟ್ಟಂತೆ ಬಿಜೆಪಿ ಸರ್ಕಾರ ಯಾವುದನ್ನೂ ಮುಚ್ಚಿಟ್ಟಿಲ್ಲ ಎಂದು ಸಿ.ಟಿ.ರವಿ ತಿವಿದರು.