ಬಿಪರ್​ಜಾಯ್​ ಚಂಡಮಾರುತ ಅಬ್ಬರ; ಹಲವೆಡೆ ಆತಂಕ, 67 ರೈಲುಗಳ ಸಂಚಾರ ಸ್ಥಗಿತ

Biparjoy
Published on

ನವದೆಹಲಿ: ದೇಶದಲ್ಲಿ ಬಿಪರ್​ಜಾಯ್​ ಚಂಡಮಾರುತ ಅಬ್ಬರ ಜೋರಾಗಿದ್ದು, ಉತ್ತರಭಾರತದ ಹಲವೆಡೆ ಆತಂಕ ಸೃಷ್ಟಿಯಾಗಿದೆ. ಮತ್ತೊಂದೆಡೆ ಚಂಡಮಾರುತದ ಕಾರಣಕ್ಕೆ 67 ರೈಲುಗಳ ಸಂಚಾರ ರದ್ದುಗೊಂಡಿದೆ.

ಗುಜರಾತ್​ನ ಸೌರಾಷ್ಟ್ರ ಮತ್ತು ಕಛ್​ ಭಾಗದಲ್ಲಿ ಈಗಾಗಲೇ ಚಂಡಮಾರುತ ವ್ಯಾಪಿಸುವ ಕುರಿತು ಹವಾಮಾನ ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ಜೂ. 15ರ ಸಂಜೆ ಸುಮಾರಿಗೆ ಗುಜರಾತ್​ನ ಜಖಾವು ಬಂದರು ಬಳಿ ಅತಿ ತೀವ್ರ ಚಂಡಮಾರುತ ಬೀಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಗುಜರಾತ್​ಗೆ ಜೂ. 15ರಂದು ಅಪ್ಪಳಿಸಲಿರುವ ಬಿಪರ್​​ಜಾಯ್​ ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲೂ ಬಿಪರ್​ಜಾಯ್​ ಚಂಡಮಾರುತದ ಅಬ್ಬರ ಜೋರಾಗಿರಲಿದ್ದು, ಜೂ. 13ರಿಂದ 15ರ ವರೆಗೆ ಜನರು ಕಡಲತೀರಕ್ಕೆ ಹೋಗಬಾರದು ಎಂದು ಪಾಲ್ಘಾರ್ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಈಗಾಗಲೇ ಮೂರು ಆರ್​ಪಿಎಫ್​ ಬೆಟಾಲಿಯನ್ ಮತ್ತು ವೈದ್ಯಕೀಯ ತಂಡಗಳನ್ನು ಮುಂಬೈ ಮತ್ತು ಗುಜರಾತ್​ಗೆ ಕಳುಹಿಸಿಕೊಡಲಾಗಿದೆ. ಭುಜ್​, ಗಾಂಧಿಧಾಮ್​, ದ್ವಾರಕಾ, ಪೋರಬಂದರ್ ಮುಂತಾದೆಡೆಯ ರೈಲುಗಳನ್ನು ಮುಂದಿನ 2-3 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ವೆಸ್ಟರ್ನ್ ರೈಲ್ವೇಯ ಜನರಲ್ ಮ್ಯಾನೇಜರ್ ಅಶೋಕ್​ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಇಂಡಿಯನ್ ಕೋಸ್ಟ್ ಗಾರ್ಡ್​ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಬಂದರು ಪ್ರಾಧಿಕಾರಗಳಿಗೆ ಮುನ್ನೆಚ್ಚರಿಕೆಯ ಸಂದೇಶ ರವಾನಿಸಲಾಗಿದ್ದು, ಎಲ್ಲ ನೌಕಯಾನಿಗಳು ಕೂಡಲೇ ಸುರಕ್ಷಿತ ಪ್ರದೇಶಕ್ಕೆ ಮರಳುವಂತೆಯೂ ತಿಳಿಸಲಾಗಿದೆ. ಪ್ರಾದೇಶಿಕ ಕಾರ್ಯಾಚರಣಾ ಕೇಂದ್ರ ಮತ್ತು ರೇಡಾರ್ ಸ್ಟೇಷನ್​ಗಳ ಮೂಲಕವೂ ಸಂದೇಶ ರವಾನಿಸಲಾಗಿದ್ದು, ಎಲ್ಲ ಹಡಗುಗಳವರು ಸುರಕ್ಷಿತ ಸ್ಥಳಕ್ಕೆ ಮರಳಬೇಕು ಎಂದು ಸೂಚನೆ ನೀಡಲಾಗಿದೆ. ಇಂಡಿಯಾ ಕೋಸ್ಟ್ ಗಾರ್ಡ್​ನ ಹಡಗುಗಳು ಈಗಾಗಲೇ ಗುಜರಾತ್ ಕಡಲ ತೀರದಲ್ಲಿ ಗಸ್ತು ಆರಂಭಿಸಿವೆ ಎಂದು ಇಂಡಿಯನ್ ಕೋಸ್ಟ್​ ಗಾರ್ಡ್​ನ ಡೆಪ್ಯುಟಿ ಡೈರೆಕ್ಟರ್ ಜನರಲ್​ (ಆಪರೇಷನ್ಸ್​) ಮನಿಷ್ ಪಾಠಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net