

ಬಾಗ್ದಾದ್: ಇರಾಕ್ ನಲ್ಲಿ ಹೆಣ್ಣುಮಕ್ಕಳಿಗೆ ವಿವಾಹದ ವಯಸ್ಸು 9ವರ್ಷಕ್ಕೆ ಇಳಿಸಲು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಮಸೂದೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತವಾಗುತ್ತಿದೆ.
ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 9 ವರ್ಷಕ್ಕೆ ಇಳಿಸಲು ಅಲ್ಲಿನ ಸರ್ಕಾರ ಮಸೂದೆಯಲ್ಲಿ ಪ್ರಸ್ತಾಪಿಸಿದೆ. ಈ ವಿವಾದಾತ್ಮಕ ಮಸೂದೆಯನ್ನು ಇರಾಕಿನ ನ್ಯಾಯ ಸಚಿವಾಲಯವು ಪರಿಚಯಿಸಿದೆ. ವೈಯಕ್ತಿಕ ಸ್ಥಿತಿಯ ಕಾನೂನಿಗೆ ತಿದ್ದುಪಡಿ ತರುವ ಉದ್ದೇಶದಿಂದ ಇದನ್ನು ತರಲಾಗಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಇರಾಕ್‌ನಲ್ಲಿ ಹುಡುಗಿಯರ ಮದುವೆ ವಯಸ್ಸು 18 ವರ್ಷ. ಈ ಮಸೂದೆ ಜಾರಿಯಾದರೆ ಹೆಣ್ಣು ಮಕ್ಕಳಿಗೆ 9 ವರ್ಷ ಹಾಗೂ ಗಂಡು ಮಕ್ಕಳಿಗೆ 15 ವರ್ಷಕ್ಕೆ ಮದುವೆ ಮಾಡುವುದಕ್ಕೆ ಯಾವುದೇ ಕಾನೂನು ಅಡ್ಡಿ ಇರುವುದಿಲ್ಲ. ಇದರಿಂದ ಬಾಲ್ಯ ವಿವಾಹಗಳು ಹೆಚ್ಚಾಗುವ ಆತಂಕವಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳ ವಿಷಯದಲ್ಲಿ ಇದುವರೆಗೆ ಸಾಧಿಸಿರುವ ಪ್ರಗತಿಗೆ ಧಕ್ಕೆ ತರಲಿದೆ ಎಂಬ ತೀವ್ರ ಟೀಕೆ ವ್ಯಕ್ತವಾಗಿದೆ.
ಮಾನವ ಹಕ್ಕುಗಳ ಗುಂಪುಗಳು ಮತ್ತು ಮಹಿಳಾ ಗುಂಪುಗಳು ಈ ಮಸೂದೆಯನ್ನು ಬಲವಾಗಿ ವಿರೋಧಿಸಿವೆ. ಇದು ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ, ಇದರ ಪರಿಣಾಮವಾಗಿ ಶಾಲೆಯಿಂದ ಹೊರಗುಳಿಯುವ ಹೆಣ್ಣುಮಕ್ಕಳ ಸಂಖ್ಯೆ ಮತ್ತು ಆರಂಭಿಕ ಗರ್ಭಾವಸ್ಥೆಯಲ್ಲಿ ಹೆಚ್ಚಳವಾಗುತ್ತದೆ. ಕೌಟುಂಬಿಕ ದೌರ್ಜನ್ಯ ಹೆಚ್ಚಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯೂನಿಸೆಫ್ ಪ್ರಕಾರ, ಇರಾಕ್‌ನಲ್ಲಿ 28 ಪ್ರತಿಶತ ಹುಡುಗಿಯರು ಈಗಾಗಲೇ 18 ವರ್ಷಕ್ಕಿಂತ ಮುಂಚೆಯೇ ಮದುವೆಯಾಗಿದ್ದಾರೆ. ಈ ಹಿಂದೆ ಇರಾಕ್ ಸಂಸತ್ತಿನಲ್ಲಿ ವಿವಾಹ ವಯೋಮಿತಿ ತಗ್ಗಿಸುವ ಪ್ರಯತ್ನ ನಡೆದಿದ್ದರೂ ಸಂಸದರ ಆಕ್ಷೇಪದಿಂದ ಹಿಂದೆ ಸರಿಯಬೇಕಾದ ಪರಿಸ್ಥಿತಿ ತಲೆದೋರಿತ್ತು.