

ನ್ಯೂಯಾರ್ಕ್: ಅಮೆರಿಕದ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಅವರು ಮಾಜಿ ಪತ್ನಿ ಮಿಲಿಂದಾ ಗೇಟ್ಸ್ ರನ್ನು ಮತ್ತೆ ವರಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಾಜಿ ಪತ್ನಿ ಮಿಲಿಂದಾರನ್ನು ಮತ್ತೆ ವಿವಾಹವಾಗುವುದು ದೊಡ್ಡ ವಿಚಾರವಾಗಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
30 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಗೇಟ್ಸ್ ದಂಪತಿ, 2021ರ ಮೇ ತಿಂಗಳಲ್ಲಿ ವಿವಾಹ ವಿಚ್ಛೇದನದ ಬಯಕೆ ವ್ಯಕ್ತಪಡಿಸಿದ್ದರು. ವಿಚ್ಛೇದನ ಪ್ರಕ್ರಿಯೆ ಆಗಸ್ಟ್ನಲ್ಲಿ ಪೂರ್ಣಗೊಂಡಿತ್ತು. ಆದರೆ, ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಷನ್ ಒಟ್ಟಾಗಿ ಮುಂದುವರಿಸಲು ಅವರು ನಿರ್ಧರಿಸಿದ್ದರು. ಕಳೆದ ಎರಡು ವರ್ಷ ‘ಬಹಳ ನಾಟಕೀಯ’ ಆಗಿತ್ತು ಎಂದು ಬಿಲ್ ಹೇಳಿದ್ದಾರೆ. ಕೋವಿಡ್ ಮಹಾಮಾರಿ ಹಾಗೂ ವಿವಾಹ ವಿಚ್ಛೇದನಕ್ಕಿಂತ ಮಕ್ಕಳು ತನ್ನನ್ನು ಬಿಟ್ಟು ಹೋಗಿದ್ದೇ ‘ತೀರಾ ವಿಲಕ್ಷಣ ಭಾಗವಾಗಿತ್ತು’ ಎಂದು ಮೇ 1ರಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಲ್ ಗೇಟ್ಸ್ ಹೇಳಿದ್ದಾರೆ.