

ನವದೆಹಲಿ: ಅಮೆರಿಕದ ಉದ್ಯಮಿ ಬಿಲ್ ಗೇಟ್ಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಆರೋಗ್ಯ, ಹವಾಮಾನ ಬದಲಾವಣೆ, ಜಿ20 ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಈ ಸಭೆಯ ಬಗ್ಗೆ ಬಿಲ್ ಗೇಟ್ಸ್ ಬ್ಲಾಗ್ನಲ್ಲಿ ಉಲ್ಲೇಖಿಸಿದ್ದು, ಹಲವು ವಿಚಾರಗಳಲ್ಲಿ ಭಾರತವನ್ನು ಹೊಗಳಿದ್ದಾರೆ.
ಜಗತ್ತು ಅನೇಕ ಸವಾಲುಗಳಿಂದ ಸುತ್ತುವರಿದಿರುವ ಸಮಯದಲ್ಲಿ, ಭಾರತದಂತಹ ಕ್ರಿಯಾತ್ಮಕ ಮತ್ತು ಸೃಜನಶೀಲ ದೇಶಕ್ಕೆ ಭೇಟಿ ನೀಡಿರುವುದು ಸ್ಪೂರ್ತಿ ತಂದಿದೆ. ನಾವೀನ್ಯತೆಯಲ್ಲಿ ಹೂಡಿಕೆ ಮಾಡಿದಾಗ ಏನೆಲ್ಲ ಸಾಧ್ಯ ಎಂಬುದನ್ನು ಭಾರತ ಜಗತ್ತಿಗೆ ತೋರಿಸುತ್ತಿದೆ. ಆರೋಗ್ಯ, ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಹೆಚ್ಚು ಸಕಾರಾತ್ಮಕವಾಗಿದ್ದೇನೆ ಎಂದಿದ್ದಾರೆ.
ಭಾರತೀಯ ಕರೋನಾ ಲಸಿಕೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಗೇಟ್ಸ್ ಶ್ಲಾಘಿಸಿದ್ದಾರೆ. ಪರಿಣಾಮಕಾರಿ, ಸುರಕ್ಷಿತ ಮತ್ತು ಕೈಗೆಟಕುವ ದರದಲ್ಲಿ ಕರೋನಾ ಲಸಿಕೆ ತಯಾರಿಸುವ ಭಾರತದ ಅದ್ಭುತ ಸಾಮರ್ಥ್ಯ ಶ್ಲಾಘನೀಯ. ಈ ಲಸಿಕೆಗಳು ಲಕ್ಷಾಂತರ ಜನರ ಜೀವಗಳನ್ನು ಉಳಿಸಿದವು ಎಂದಿದ್ದಾರೆ.
ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಸರ್ಕಾರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. ಇದಕ್ಕೆ ಗತಿ ಶಕ್ತಿ ಯೋಜನೆ ಒಂದು ಉದಾಹರಣೆಯಾಗಿದೆ. ಈ ಕಾರ್ಯಕ್ರಮವು ರೈಲು ಮತ್ತು ರಸ್ತೆ ಸೇರಿ 16 ಸಚಿವಾಲಯಗಳನ್ನು ಡಿಜಿಟಲ್ ಮೂಲಕ ಸಂರ್ಪಸುತ್ತದೆ. ಇದರಿಂದಾಗಿ ಹಲವು ಯೋಜನೆಗಳನ್ನು ಏಕಕಾಲದಲ್ಲಿ ಕೈಗೊಳ್ಳಬಹುದು ಎಂದಿದ್ದಾರೆ.
30 ಕೋಟಿ ಜನರು ಡಿಜಿಟಲ್ ಪಾವತಿ ಸೌಲಭ್ಯ ಬಳಸುತ್ತಿದ್ದಾರೆ. ಇವರಲ್ಲಿ 20 ಕೋಟಿ ಮಹಿಳೆಯರು ಸೇರಿದ್ದಾರೆ. ಭಾರತವು ಆರ್ಥಿಕ ಸೇರ್ಪಡೆಯನ್ನು ಆದ್ಯತೆಯನ್ನಾಗಿ ಮಾಡಿದ್ದ ರಿಂದ ಮತ್ತು ಡಿಜಿಟಲ್ ಐಡಿ ಸಿಸ್ಟಮ್ (ಆಧಾರ್) ಮತ್ತು ಡಿಜಿಟಲ್ ಬ್ಯಾಂಕಿಂಗ್ನಂತಹ ನವೀನ ವೇದಿಕೆಗಳಲ್ಲಿ ಹೂಡಿಕೆ ಮಾಡಿದ್ದರಿಂದ ಇದು ಸಾಧ್ಯವಾಯಿತೆಂದು ಬಿಲ್ ಗೇಟ್ಸ್ ಹೊಗಳಿದ್ದಾರೆ.