

ನವದೆಹಲಿ: ತಮಗೆ ನೀಡಲಾಗಿದ್ದ ಕ್ಷಮಾದಾನವನ್ನು ರದ್ದು ಮಾಡಿರುವ ಕ್ರಮ ಪ್ರಶ್ನಿಸಿ ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅರ್ಜಿಯು ಸಂಪೂರ್ಣ ದುರುದ್ಧೇಶದಿಂದ ಕೂಡಿದೆ ಎಂದು ಹೇಳಿದೆ.
ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಆರೋಪಿಗಳಾದ ರಾಧೇಶ್ಯಾಮ್ ಭಗವಾನದಾಸ ಷಾ ಮತ್ತು ರಾಜುಭಾಯ್ ಬಾಬುಲಾಲ್ ಸೋನಿ ಸಲ್ಲಿಸಿರುವ ಅರ್ಜಿ ಸಂಪೂರ್ಣ ದುರುದ್ದೇಶದಿಂದ ಕೂಡಿದೆ. ಸಂವಿಧಾನದ ಪರಿಚ್ಛೇದ 32ರಡಿ ಈ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ? ಇನ್ನೊಂದು ಪೀಠ ನೀಡಿದ ತೀರ್ಪಿನ ವಿರುದ್ಧ ನೀಡಲಾದ ಮೇಲ್ಮನವಿಯನ್ನು ನಾವು ಆಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2002ರಲ್ಲಿ ಗುಜರಾತ್ನ ಗೋದ್ರಾದಲ್ಲಿ ನಡೆದ ಗಲಭೆ ವೇಳೆ ಬಿಲ್ಕಿಸ್ ಬಾನೊ ಎಂಬ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬದವರನ್ನು ಕೊಲೆ ಮಾಡಲಾಗಿತ್ತು. ಇದರಲ್ಲಿ ಬಕಾಭಾಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇವರ ಮೇಲಿನ ಆರೋಪ ಸಾಭೀತಾಗಿದ್ದರಿಂದ 2008ರಲ್ಲಿ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಗುಜರಾತ್ ಸರ್ಕಾರದ ಆದೇಶದ ಮೇರೆಗೆ ಎಲ್ಲ ಅಪರಾಧಿಗಳು 2022ರ ಆಗಸ್ಟ್ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.