ಮುಂಬೈ: ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡ ಬಳಿಕ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಹಾರ್ದಿಕ್ ಪಾಂಡ್ಯ ಆ ಬಳಿಕ ಐಪಿಎಲ್ನಲ್ಲಿ ಸಖತ್ ಟ್ರೋಲ್ ಆಗುವ ಮೂಲಕ ಸೌಂಡ್ ಮಾಡಿದ್ದರು. ಕಳೆದ ತಿಂಗಳು ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ ಇದೀಗ ನಾಯಕತ್ವದ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಮಾದರಿಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದು, ಇವರ ಸ್ಥಾನಕ್ಕೆ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಚುಟುಕು ಮಾದರಿಯ ಕ್ರಿಕೆಟ್ಗೆ ಹಾರ್ದಿಕ್ ಹಾಗೂ ಸೂರ್ಯಕುಮಾರ್ ಪೈಕಿ ಒಬ್ಬರು ನಾಯಕರಾಗಲಿದ್ದು, ನಾಯಕ ಸ್ಥಾನಕ್ಕೆ ಸೂರ್ಯಕುಮಾರ್ ಬಹುತೇಕ ಫಿಕ್ಸ್ ಎಂದು ಹೇಳಲಾಗಿದೆ.
ಹಾರ್ದಿಕ್ರನ್ನು ನಾಯಕನನ್ನಾಗಿ ನೇಮಿಸುವ ಕುರಿತು ನೂತನ ಕೋಚ್ ಗೌತಮ್ ಗಂಭೀರ್ ಕ್ಯಾತೆ ತೆಗೆದಿದ್ದು, ಸೂರ್ಯಕುಮಾರ್ರನ್ನು ನೇಮಿಸುವಂತೆ ಪಟ್ಟು ಹಿಡಿದಿದ್ದಾರೆ. ಕೇಳಿ ಬಂದಿರುವ ಮಾಹಿತಿ ಪ್ರಕಾರ ಆಯ್ಕೆ ಸಮಿತಿ ಸದಸ್ಯರು ಹಾರ್ದಿಕ್ರನ್ನು ಕ್ಯಾಪ್ಟನ್ ಮಾಡಲು ಆಸಕ್ತಿ ತೋರುತ್ತಿದ್ದು, ಇದಕ್ಕೆ ಗೌತಮ್ ಗಂಭೀರ್ ಅಡ್ಡಗಾಲು ಹಾಕಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಹಾರ್ದಿಕ್ ಪಾಂಡ್ಯ ನಾಯಕನಾದರೆ, ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಆತನ ಫಿಟ್ನೆಸ್ ತಂಡಕ್ಕೆ ದೊಡ್ಡ ತಲೆನೋವಾಗಿದ್ದು, ಹೀಗಾಗಿ ಟೀಮ್ ಇಂಡಿಯಾ ಪರ ಖಾಯಂ ಆಗಿ ಕಾಣಿಸಿಕೊಳ್ಳುವ ಆಟಗಾರನಿಗೆ ನಾಯಕತ್ವ ನೀಡುವಂತೆ ಗಂಭೀರ್ ಆಯ್ಕೆ ಸಮಿತಿ ಮೇಲೆ ಒತ್ತಡ ಹೇರಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಯಶಸ್ಸಿನ ಬೆನ್ನಲ್ಲೇ ಐಸಿಸಿಗೆ ಭಾರೀ ನಷ್ಟ; ನೂತನ ಅಧ್ಯಕ್ಷರಾಗಿ ಜಯ್ ಷಾ ನೇಮಕ?
ಇತ್ತ ಗಂಭೀರ್ ಆರೋಪಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಉತ್ತರಿಸಿರುವ ಹಾರ್ದಿಕ್ ಪಾಂಡ್ಯ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡಾಗ ಮತ್ತು ಎರಡನೇ ಫೋಟೋ ಪ್ರಸ್ತುತ ಸಮಯದ್ದು. ಈ ಪೋಸ್ಟ್‌ನಲ್ಲಿ, ಹಾರ್ದಿಕ್ ತಾವು ಫಿಟ್‌ನೆಸ್‌ಗೆ ಎಷ್ಟು ಒತ್ತು ನೀಡುತ್ತೇನೆ ಎಂಬುದನ್ನು ಪರೋಕ್ಷವಾಗಿ ನೂತನ ಕೋಚ್ಗೆ ಹೇಳಿದ್ದಾರೆ. 2023 ರ ವಿಶ್ವಕಪ್‌ನಲ್ಲಿ ಗಾಯಗೊಂಡ ನಂತರ ಈ ಪ್ರಯಾಣವು ಕಷ್ಟಕರವಾಗಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿನ ಗೆಲುವಿನೊಂದಿಗೆ ಪ್ರಯತ್ನವು ಸಾರ್ಥಕವಾಗಿದೆ. ಎಲ್ಲಿಯವರೆಗೆ ನೀವು ಪ್ರಯತ್ನದಲ್ಲಿ ತೊಡಗುತ್ತೀರಿ, ನೀವು ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಟಿ20 ಮಾದರಿಗೆ ನೂತನ ನಾಯಕನ ನೇಮಕವು ಬಿಸಿಸಿಐ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದು ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ. ಸದ್ಯಕ್ಕೆ ಸೂರ್ಯಕುಮಾರ್ ಯಾದವ್ರನ್ನು ನೇಮಿಸುವ ಮೂಲಕ ಕೋಚ್ ಗೌತಮ್ ಗಂಭೀರ್ಗೆ ಆಯ್ಕೆ ಸಮಿತಿ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ಒಳಜಗಳ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.