ನವದೆಹಲಿ: ಯುಎಸ್ಎ-ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಟಿ20 ವಿಶ್ವಕಪ್ ಒಂದಿಲ್ಲೊಂದು ಕಾರಣ್ಕಕೆ ಸದ್ದು ಮಾಡಿತ್ತು. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕದಲ್ಲಿ ಈ ಬಾರಿಯ ಟೂರ್ನಿ ನಡೆದಿದ್ದು, ಎಲ್ಲರ ಗಮನ ಸೆಳೆಯುವುದಕ್ಕೆ ಪ್ರಮುಖ ಕಾರಣವಾಗಿತ್ತು. ಅಮೆರಿಕದಲ್ಲಿ ಕ್ರಿಕೆಟ್ಅನ್ನು ಹೆಚ್ಚು ಉತ್ತೇಜಿಸುವ ಸಲುವಾಗಿ ಐಸಿಸಿ ಈ ಬಾರಿಯ ಟೂರ್ನಿಯನ್ನು ದೊಡ್ಡಣ್ಣನ ನೆಲದಲ್ಲಿ ಆಯೋಜಿಸಿತ್ತು. ಆದರೆ, ಐಸಿಸಿಗೆ ಇದು ದೊಡ್ಡ ಮಟ್ಟದ ನಷ್ಟವನ್ನು ಉಂಟು ಮಾಡಿದೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿ ಒಟ್ಟು 16 ಪಂದ್ಯಗಳನ್ನು ನಡೆಸಲಾಯಿತು. ಇದರಲ್ಲಿ ನ್ಯೂಯಾರ್ಕ್ (8), ಫ್ಲೋರಿಡಾ ಮತ್ತು ಟೆಕ್ಸಾಸ್ನಲ್ಲಿ ತಲಾ 4 ಪಂದ್ಯಗಳನ್ನು ನಡೆಸಲಾಯಿತು. ಅಮೆರಿಕದಲ್ಲಿ ಬಹುಪಾಲು ಪಂದ್ಯಗಳು ಆಯೋಜನೆಗೊಂಡ ಕಾರಣ ಐಸಿಸಿಗೆ 167 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತಿಳಿದು ಬಂದಿದ್ದು, ಈ ವಿಚಾರ ಸಖತ್ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಆತನ ಜತೆ ನಾನು ಕೆಲಸ ಮಾಡಲ್ಲ; ಬಿಸಿಸಿಐಗೆ ಗೌತಮ್ ಗಂಭೀರ್ ಖಡಕ್ ಮಾತು
ಜುಲೈ 19ರಂದು ಶ್ರೀಲಂಕಾದ ಕೊಲಂಬೊದಲ್ಲಿ ಆರಂಭವಾಗಲಿರುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಲಿದ್ದು, ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಟೂರ್ನಿ ಆಯೋಜಿಸುವುದರ ಬಗ್ಗೆ ಪ್ರಮುಖವಾಗಿ ಸದಸ್ಯರು ಮಾತನಾಡಲಿದ್ದಾರೆ. ಇದಲ್ಲದೆ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ಪಾಕಿಸ್ತಾನಕ್ಕೆ ಹೋಗದಿರುವ ಬಗ್ಗೆಯೂ ಚರ್ಚೆಯು ನಡೆಯಲಿದೆ.
ಇದಲ್ಲದೆ ಐಸಿಸಿಗೆ ನೂತನ ಮುಖ್ಯಸ್ಥರ ನೇಮಕ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅವಧಿ ಈ ವರ್ಷ ಮುಗಿಯಲಿದ್ದು, ಐಸಿಸಿ ನೂತನ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಇದರಲ್ಲಿ ಪ್ರಮುಖವಾಗಿ ಜಯ್ ಷಾ ಹೆಸರು ಕೇಳಿ ಬರುತ್ತಿದ್ದು, ಅಂತಿಮವಾಗಿ ಏನಾಗಲಿದೆ ಎಂಬುದು ಸಭೆಯ ನಂತರ ತಿಳಿಯಲಿದೆ.