

ವಿಶ್ವದ ಹಳೆಯ ಪ್ರಜಾಪ್ರಭುತ್ವ ಮತ್ತು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೆರಿಕ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ಬಂಧ ಹಲವು ಅನುಮಾನಗಳ ಕಾಮೋರ್ಡವನ್ನು ಚದುರಿ ಹೊಸ ಎತ್ತರಕ್ಕೆ ತಲುಪಿದೆ. ಫ್ರಾನ್ಸ್ ಪ್ರವಾಸ ಮುಗಿಸಿ ಅಮೆರಿಕಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿ ದೊರೆತ ಸ್ವಾಗತ, ಅನಿವಾಸಿ ಭಾರತೀಯರ ಉತ್ಸಾಹ ಉಭಯ ದೇಶಗಳ ಸ್ನೇಹಸಂಬಂಧ ಹಾದಿಯನ್ನು ಮತ್ತಷ್ಟು ವಿಸ್ತಾರಗೊಳಿಸಿದೆ.
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಮಾತುಕತೆಯು, ಎರಡೂ ರಾಷ್ಟ್ರಗಳ ಬಾಂಧವ್ಯವನ್ನು ವೃದ್ಧಿಸುವ ದಿಕ್ಸೂಚಿಯಾಗಿದೆ. ರಕ್ಷಣಾ ವ್ಯವಸ್ಥೆಯ ಬಲವರ್ಧನೆ, ವಾಣಿಜ್ಯ-ವ್ಯಾಪಾರ ಹೆಚ್ಚಳ, ಇಂಧನ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ವೃದ್ಧಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಫಲಪ್ರದ ಚರ್ಚೆ ನಡೆದಿದೆ. ಮುಖ್ಯವಾಗಿ, ಭಯೋತ್ಪಾದನೆ ವಿರುದ್ಧ ಸಮರವನ್ನು ಇನ್ನಷ್ಟು ತೀವ್ರಗೊಳಿಸಲು, ಅದಕ್ಕಾಗಿ ಪರಸ್ಪರ ಸಹಕಾರ ನೀಡಲು ಎರಡೂ ರಾಷ್ಟ್ರಗಳು ಒಮ್ಮತಕ್ಕೆ ಬಂದಿವೆ.
ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದಿದ್ದ ಭೀಕರ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಅಮೆರಿಕ ಒಪ್ಪಿಗೆ ಸೂಚಿಸಿದ್ದು, ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನೆಯಾದಂತಾಗಿದೆ. ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗುತ್ತಿದ್ದಂತೆ ತೆಗೆದುಕೊಂಡ ಕಠಿಣ ನಿರ್ಧಾರಗಳು, ದಿಢೀರನೆ ಅನುಸರಿಸಿದ ನಿಲುವುಗಳ ಪರಿಣಾಮ ಮುಂದೇನು ಎಂಬ ಪ್ರಶ್ನೆ ಉದ್ಭವವಾಗಿತ್ತು. ಅಲ್ಲದೆ, ಇದರಿಂದ ಭಾರತ-ಅಮೆರಿಕ ನಡುವಿನ ಸಂಬಂಧ ಹಳಿ ತಪ್ಪಲಿದೆ ಎಂಬ ಆತಂಕ ಕಾಡಿದ್ದು ಸುಳ್ಳಲ್ಲ. ಆದರೆ, ಮಾತುಕತೆಯ ನಂತರ ಟ್ರಂಪ್ ಹಾಗೂ ಮೋದಿ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಸ್ನೇಹ, ಸಹಕಾರ, ಪರಸ್ಪರ ವಿಶ್ವಾಸ, ನಂಬಿಕೆಯ ಸ್ಪಷ್ಟ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಿಲಿಟರಿ ಕ್ಷೇತ್ರದ ಬಲವರ್ಧನೆಯ ಭಾಗವಾಗಿ ಅಮೆರಿಕದ ಅತ್ಯಾಧುನಿಕ ಎಫ್-35 ಯುದ್ಧ ವಿಮಾನಗಳನ್ನು ಭಾರತಕ್ಕೆ ಒದಗಿಸಲಾಗುವುದು, ರಕ್ಷಣಾ, ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ. ಮಾತ್ರವಲ್ಲ, ‘ಭಾರತ-ಮಧ್ಯಪ್ರಾಚ್ಯ-ಯೂರೋಪ್ ಕಾರಿಡಾರ್’ ನಿರ್ವಿುಸಲು ಬದ್ಧ ಎಂದಿದ್ದಾರೆ. ಭಾರತದಲ್ಲಿ ಕ್ಯಾಂಪಸ್ಗಳನ್ನು ಸ್ಥಾಪಿಸುವಂತೆ ಪ್ರಧಾನಿ ಮೋದಿ ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಕರೆ ನೀಡಿದ್ದಾರೆ. ‘ಭಾರತ ಮತ್ತು ಅಮೆರಿಕ ನಡುವಿನ ಸಹಕಾರವು ಉಭಯ ರಾಷ್ಟ್ರಗಳ ಪ್ರಗತಿಯ ಜತೆಗೆ ಉತ್ತಮ ಜಗತ್ತನ್ನು ರೂಪಿಸಲಿದ್ದು, ಸಮೃದ್ಧಿಯತ್ತ ಸಾಗಲಿದ್ದೇವೆ. ತಂತ್ರಜ್ಞಾನ ಹಂಚಿಕೆಯ ವಿಷಯದಲ್ಲಿ ಜಂಟಿಯಾಗಿ ಮುನ್ನಡೆಯುತ್ತೇವೆ’ ಎಂದು ಮೋದಿ ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡುವಂತೆ ಟ್ರಂಪ್ ಅವರಿಗೆ ಆಹ್ವಾನ ನೀಡಿದ್ದಾರೆ.
ಟ್ರಂಪ್ ಮತ್ತು ಮೋದಿಯವರ ಭೇಟಿ ಮತ್ತು ಸಂಬಂಧಿತ ಬೆಳವಣಿಗೆಗಳ ಮೇಲೆ ಜಾಗತಿಕ ರಾಷ್ಟ್ರಗಳು ಗಮನ ಹರಿಸಿವೆ. ಹಾಗಾಗಿ, ಇದು ಕೇವಲ ಔಪಚಾರಿಕ ಭೇಟಿ ಆಗಿರದೆ, ವರ್ತಮಾನದ ಅನಿವಾರ್ಯತೆಗಳನ್ನು ಅರಿತುಕೊಂಡು, ಕೆಲ ಭಿನ್ನಾಭಿಪ್ರಾಯ ಬದಿಗಿರಿಸಿ ಒಟ್ಟಿಗೆ ಸಾಗುವ ಅಗತ್ಯವನ್ನು ಸಾರಿದೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಭಾರತ-ಅಮೆರಿಕ ಸ್ನೇಹ ಹಾಗೂ ಬಾಂಧವ್ಯ ಮತ್ತಷ್ಟು ಬಲಗೊಳ್ಳುವುದರಲ್ಲಿ, ಆ ಮೂಲಕ ಹಲವು ಕ್ಷೇತ್ರಗಳಲ್ಲಿ ಸಹಕಾರ ಏರ್ಪಡುವುದರಲ್ಲಿ ಅನುಮಾನವಿಲ್ಲ.