

ಶಿವಮೊಗ್ಗ: ಖಾಸಗಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ಈ ಅವಘಡ ಸಂಭವಿಸಿದೆ.
ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಯುವಕ ಶಶಾಂಕ್ ಸ್ಥಳದಲ್ಲೇ ಸಾವಿಗೀಡಾಗಿದ್ದು, ಯುವತಿ ನಿರ್ಮಿತಾಗೆ ಗಂಭೀರ ಗಾಯವಾಗಿದೆ. ಇವರು ಶಿವಮೊಗ್ಗದಿಂದ ಉಡುಪಿ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಖಾಸಗಿ ಬಸ್ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ಬರುತ್ತಿತ್ತು. ಆಗುಂಬೆ ಘಾಟಿಯ 12ನೇ ತಿರುವಿನ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಯುವತಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಂಬಂಧ ಉಡುಪಿಯ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.