

ಬೆಂಗಳೂರು: ನಗರದ ಮೂಡಲಪಾಳ್ಯದಲ್ಲಿ ಮದ್ಯಪಾನ ಮಾಡಿ ಕಾರ್ ರೇಸ್ ಮಾಡುತ್ತಿದ್ದ ಯುವಕರಿಂದಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕ ಅಕ್ಷಯ್ ಇಂದು ಸಾವನ್ನಪ್ಪಿದ್ದಾನೆ. ಡಿಸೆಂಬರ್ 3ರಂದು ನಡೆದ ಭೀಕರ ಅಪಘಾತದಿಂದಾಗಿ ಗಂಭೀರ ಗಾಯಾಳುವಾಗಿದ್ದ ಅಕ್ಷಯ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗ ಹಿನ್ನೆಲೆಯಲ್ಲಿ ಆತ ಇಂದು ಕೊನೆಯುಸಿರೆಳೆದಿದ್ದಾನೆ.
ಹೋಂಡಾ ಸಿವಿಕ್ ಮತ್ತು ಸ್ವಿಫ್ಟ್ ಕಾರಿನಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರು ಕಾರು ರೇಸ್ ಮಾಡುತ್ತಿದ್ದರು. ಹಠಕ್ಕೆ ಬಿದ್ದವರಂತೆ ನಾ ಮುಂದೆ ತಾ ಮುಂದೆ ಎಂಬಂತೆ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಎದುರಿನ ರಾಯಲ್ ಎನ್ಫೀಲ್ಡ್ ಬೈಕ್ಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ರಭಸಕ್ಕೆ ಬೈಕ್ ಎರಡು ಪೀಸ್ ಆಗಿ, ಬೈಕ್ ಸವಾರ ಅಕ್ಷಯ್ (28) ಮೇಲಕ್ಕೆ ಹಾರಿಬಿದ್ದಿದ್ದ. ಡಿಕ್ಕಿ ಹೊಡೆದ ಪರಿಣಾಮ ಅಕ್ಷಯ್ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು.
ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.