ಮಕ್ಕಳ ಮೆರವಣಿಗೆ ಮೇಲೆಯೇ ಚಲಿಸಿದ ಲಾರಿ! ನಾಲ್ವರು ಮಕ್ಕಳು ಬಲಿ, 12 ಜನರಿಗೆ ಗಾಯ

acc
Published on: 

ಅಮರಾವತಿ​: ಕ್ರಿಸ್​ಮಸ್​ ಪ್ರಯುಕ್ತ ಮಕ್ಕಳು ಮಾಡುತ್ತಿದ್ದ ಮೆರವಣಿಗೆಯ ಮೇಲೆ ಲಾರಿಯೊಂದು ಚಲಿಸಿದ್ದು, ನಾಲ್ವರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ನಡೆದಿದೆ.

ಮಂಗಳವಾರದಂದು ಹೈದರಾಬಾದ್-ಕಡಪಾ ರಾಷ್ಟ್ರೀಯ ಹೆದ್ದಾರಿ ಸಮೀಪದ ಯರಂಗುಂಟ್ಲಾ ಗ್ರಾಮದಲ್ಲಿ ಮಕ್ಕಳ ಮೆರವಣಿಗೆ ಏರ್ಪಡಿಸಲಾಗಿತ್ತು. ಸುಮಾರು 40 ಮಕ್ಕಳು ಹಾಗೂ ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿದ್ದು, ಮೆರವಣಿಗೆಯ ಮೇಲೆ ಹರಿದಿದೆ. 8ರಿಂದ 15 ವಯಸ್ಸಿನ ಮೂರು ಮಕ್ಕಳು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಇನ್ನೊಂದು ಮಗು ಆಸ್ಪತ್ರೆಗೆ ದಾಖಲಾಗಿ ಒಂದು ಗಂಟೆಯಲ್ಲಿ ಸಾವನ್ನಪ್ಪಿದೆ. 12 ಜನರಿಗೆ ಗಾಯವಾಗಿದೆ. ಅದರಲ್ಲಿ ಐದು ಮಂದಿಗೆ ಗಂಭೀರ ಗಾಯವಾಗಿದ್ದು ಅವರನ್ನು ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ನಂದ್ಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಎಂಟು ಮಕ್ಕಳಿರುವುದಾಗಿ ತಿಳಿಸಲಾಗಿದೆ.

ಅಪಘಾತ ಮಾಡಿದ ಲಾರಿ ಚಾಲಕ, ಗಾಡಿಯನ್ನು ನಿಲ್ಲಿಸದೆ ತೆರಳಿದ್ದಾನೆ. ಗ್ರಾಮಸ್ಥರ ಸಹಾಯದೊಂದಿಗೆ ಆತನನ್ನು ಬಾತಲೂರು ಬಳಿ ಹಿಡಿಯಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ಮಕ್ಕಳ ಬಗ್ಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)